September 30, 2026
Wednesday, September 30, 2026
spot_img

ಹಜ್, ಉಮ್ರಾ ಯಾತ್ರೆ ಆಯೋಜಿಸುವ ಖಾಸಗಿ ಸಂಸ್ಥೆಗಳಿಗೆ ವಿಶೇಷ ಕಾನೂನು ಜಾರಿ: ಸಚಿವ ಯು.ಟಿ ಖಾದರ್

ಹೊಸದಿಗಂತ ವರದಿ ಉಳ್ಳಾಲ:

ಖಾಸಗಿ ಸಂಸ್ಥೆಗಳಿಗೆ ಹಜ್, ಉಮ್ರಾ ಯಾತ್ರೆಗಳಿಗೆ ಸಂಬಂಧಿಸಿ ವಿಶೇಷ ಕಾನೂನು ಜಾರಿ ಮಾಡಲಾಗುವುದೆಂದು ಹಜ್, ವಕ್ಫ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಹೇಳಿದ್ದಾರೆ.

ಈದ್ ಮಿಲಾದ್ ಪ್ರಯುಕ್ತ ಉಳ್ಳಾಲ ಕೋಟೆಪುರದಿಂದ ಮುಕ್ಕಚೇರಿ, ಆಝಾದ್ ನಗರ ರಸ್ತೆಯಾಗಿ ಉಳ್ಳಾಲ ದರ್ಗಾವರೆಗೆ ನಡೆದ ಕಾಲ್ನಡಿಗೆ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಬಾರಿ ಹನ್ನೊಂದು ಸಾವಿರ ಮಂದಿ ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಿದ್ದಾರೆ. ಹಜ್ ಜೊತೆ ಉಮ್ರಾ ಯಾತ್ರೆಯನ್ನು ಹಜ್ ಕಮಿಟಿ ಅಧೀನದಲ್ಲಿ ವ್ಯವಸ್ಥೆ ಮಾಡಲಾಗುವುದು. ಯಾತ್ರಾರ್ಥಿಗಳ ಮಾಹಿತಿ ಪಡೆಯಲು ಶೀಘ್ರವೆ ವೆಬ್ ಪೋರ್ಟಲ್ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಯಾತ್ರೆಗಳನ್ನು ಆಯೋಜಿಸುವ ಖಾಸಗಿ ಸಂಸ್ಥೆಗಳು ಯಾತ್ರಾರ್ಥಿಗಳನ್ನು ಅರ್ಧ ದಾರಿಯಲ್ಲೇ ಬಿಟ್ಟು ಬಂದಿರುವ ಬಗ್ಗೆ ಬಹಳಷ್ಟು ಆರೋಪಗಳು ಇವೆ. ಈ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಗಳಿಗೆ ಹಜ್, ಉಮ್ರಾ ಯಾತ್ರೆಗಳಿಗೆ ಸಂಬಂಧಿಸಿ ವಿಶೇಷ ಕಾನೂನು ಜಾರಿ ಮಾಡಲಾಗುವುದೆಂದು ಅವರು ಹೇಳಿದರು.

ಪ್ರವಾದಿಯವರ ಜನ್ಮ ದಿನವನ್ನು ನಾವೆಲ್ಲರೂ ಈದ್ ಮಿಲಾದ್ ಹಬ್ಬವಾಗಿ ಆಚರಿಸುವ ಜೊತೆಗೆ ಅವರ ತತ್ವಾದರ್ಶಗಳನ್ನು ಕೂಡಾ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.

ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ಧೀನ್ ಸಖಾಫಿ, ಕೋಶಾಧಿಕಾರಿ ನಾಝೀಮ್ ಮುಕ್ಕಚೇರಿ, ಅಬ್ದುಲ್ ಖಾದರ್ ಕೋಡಿ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ,ಉದ್ಯಮಿ ಕಣಚೂರು ಮೋನು, ಕೋಟೆಪುರ ಮಸೀದಿ ಅಧ್ಯಕ್ಷ ಫಾರೂಕ್ ಅಬ್ಬಾಸ್ ಕೋಟೆಪುರ, ಮದನಿ ಕಾಲೇಜಿನ ಅಹ್ಮದ್ ಕುಟ್ಟಿ ಮುಸ್ಲಿಯಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಶ್ರಫ್ ಹಾಜಿ ಕೋಡಿ ಮೊದಲಾದವರು ಉಪಸ್ಥಿತರಿದ್ದರು.

Must Read