ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಕ್ರಿತಿ ಸನೋನ್ ಅವರ ಬಟ್ಟೆಯ ವಿವಾದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರ ’ಮಹಿಳಾ ವಿರೋಧಿ ವ್ಯವಸ್ಥೆಯನ್ನು ಕೊನೆಗಾಣಿಸಿ’ ಎಂಬ ಮಾತಿಗೆ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದಾರೆ.
ಕಂಗನಾ ರಣಾವತ್ ಅವರು ಹಂಚಿಕೊಂಡಿರುವ ಪೋಸ್ಟ್ನಲ್ಲಿ ರಾಹುಲ್ ಗಾಂಧಿ ಅವರು ಮಹಿಳೆಯೊಬ್ಬಳಿಗೆ ಪಿತೃಪ್ರಧಾನ ವ್ಯವಸ್ಥೆಯನ್ನು ಧ್ವಂಸ ಮಾಡಲು ಹೇಳುತ್ತಿದ್ದಾರೆ. ಅದಕ್ಕೆ ಆ ಮಹಿಳೆ, ʼಬ್ರೋ, ವೇಟ್ ಮೊದಲು ಭಾರತ್ ಮಾತಾ ಕಿ ಜೈ ಎಂಬುದರಿಂದ ಆರಂಭಿಸೋಣʼ ಎಂದು ಉತ್ತರಿಸುವ ಚಿತ್ರವಿದೆ.

ವಿವಾದ ಹಿನ್ನೆಲೆ ಏನು?
ರಕ್ಷಾಬಂಧದ ಹಿನ್ನೆಲೆ ಒಂದು ಆಭರಣ ಜಾಹೀರಾತಿನಲ್ಲಿ ನಟಿ ಕ್ರಿತಿ ಸನೋನ್ ಧರಿಸಿದ್ದ ಬಟ್ಟೆಯ ಬಗ್ಗೆ ಕಂಗನಾ ರಣಾವತ್ ಸೇರಿದಂತೆ ಹಲವರು ನಾನಾ ರೀತಿಯಲ್ಲಿ ಟೀಕಿಸಿದ್ದರು.

ಇದಕ್ಕೆ ಉತ್ತರಿಸಿದ್ದ ನಟಿ ಕ್ರಿತಿ ಸನೋನ್, ʼಮಹಿಳೆಯರು ಏನು ಧರಿಸಬೇಕು ಎಂದು ಹೇಳುವುದನ್ನು ಯಾವಾಗ ನಿಲ್ಲಿಸುತ್ತೀರಾ?ʼ ಎಂದು ಪ್ರಶ್ನಿಸಿದ್ದರು. ಕ್ರಿತಿ ಅವರ ಮಾತನ್ನು ಬೆಂಬಲಿಸಿದ ರಾಹುಲ್ ಗಾಂಧಿ, ಮಹಿಳೆ ಏನು ಧರಿಸಬೇಕು ಮತ್ತು ಎಲ್ಲಿಗೆ ಹೋಗಬೇಕು ಎಂಬುದು ಅವಳ ಇಷ್ಟ. ಹೆಣ್ಣುಮಕ್ಕಳ ಸ್ವಾತಂತ್ರ್ಯವನ್ನು ಪ್ರಶ್ನಿಸಬೇಡಿ ಎಂದು ಹೇಳಿದ್ದರು. ಈ ವಿವಾದ ದೊಡ್ಡದಾದ ಕಾರಣ ಆ ಆಭರಣ ಸಂಸ್ಥೆಯು ತನ್ನ ಜಾಹೀರಾತನ್ನು ಹಿಂತೆಗೆದುಕೊಂಡಿದೆ.
ಕಂಗನಾ ಅವರ ಪ್ರಶ್ನೆಗಳು
ರಾಹುಲ್ ಗಾಂಧಿ ಅವರ ಈ ಮಾತಿಗೆ ಕಂಗನಾ ಅವರು ಚಿತ್ರದ ಮೂಲಕ ಕೆಲವು ಹಳೆಯ ವಿಷಯಗಳನ್ನು ನೆನಪಿಸಿ ಪ್ರಶ್ನೆ ಮಾಡಿದ್ದಾರೆ. ಮಹಿಳೆಯರ ಮೀಸಲಾತಿ ಕಾನೂನನ್ನು ಕಾಂಗ್ರೆಸ್ ವಿರೋಧಿಸಿದ್ದು ಏಕೆ? ತ್ರಿವಳಿ ತಲಾಕ್ನಂತಹ ವಿಷಯಗಳಲ್ಲಿ ಕಾಂಗ್ರೆಸ್ನ ನಿಲುವು ಏನಾಗಿತ್ತು? ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕದಲ್ಲಿ ಒಬ್ಬರೇ ಒಬ್ಬ ಮಹಿಳಾ ಸಚಿವರು ಇಲ್ಲದಿರುವುದು ಏಕೆ? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಇದನ್ನೂ ಓದಿ:
ಬಿಜೆಪಿಯ ಇತರ ನಾಯಕರ ಟೀಕೆ
ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ ಕೂಡ ರಾಹುಲ್ ಗಾಂಧಿ ವಿರುದ್ಧ ಮಾತನಾಡಿದ್ದಾರೆ. ಕೇಂದ್ರದ ಕಾಂಗ್ರೆಸ್ ನಾಯಕರು ಕಂಗನಾ ರಣಾವತ್, ಹೇಮಾ ಮಾಲಿನಿ ಮತ್ತು ದೇಶದ ರಾಷ್ಟ್ರಪತಿಗಳ ಬಗ್ಗೆ ತಪ್ಪು ಮಾತುಗಳನ್ನು ಆಡಿದಾಗ ರಾಹುಲ್ ಗಾಂಧಿ ಸುಮ್ಮನಿದ್ದರು. ಆದರೆ ಈಗ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.



