August 26, 2026
Wednesday, August 26, 2026
spot_img

ಹೋರಾಟದ ಕಾವು ಹೆಚ್ಚಿಸಿದ ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆ: ಫ್ರಿಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆ

ಹೊಸದಿಗಂತ ವರದಿ ಶಿರಸಿ:

ಬೇಡ್ತಿ ಹಾಗೂ ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿ ಹೋರಾಟವನ್ನು ತೀವ್ರಗೊಳಿಸಲು ಸ್ವರ್ಣವಲ್ಲೀ ಮಠದಲ್ಲಿ ನದಿ ತಿರುವು ಯೋಜನೆ ವಿರೋಧಿಸಿ ನಡೆದ ವಿಶೇಷ ಸಭೆ ನಿರ್ಧರಿಸಿದ್ದು ಅ.2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಶ್ರೀಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಯಿತು.

ಸಭೆಯಲ್ಲಿ ಸೆ.3ರಂದು ಗೋಕರ್ಣ ಹಾಗೂ ಕಾರವಾರ ಚಲೋ, ಮತ್ತು ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ‘ರಾಸ್ತಾ ರೋಖೋ’ ಚಳುವಳಿ ನಡೆಸಲು ತೀರ್ಮಾನಿಸಲಾಯಿತು. ಜೊತೆಗೆ ಕಾನೂನು ಹೋರಾಟ ಮುಂದುವರಿಸಲು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಯೋಜನೆಗೆ ಡಿಪಿಆರ್ ತಯಾರಿಸದಂತೆ ಗಟ್ಟಿ ನಿಲುವು ತಳೆಯಬೇಕೆಂದು ಒಮ್ಮತದಿಂದ ಆಗ್ರಹಿಸಲಾಯಿತು.

ಸಭೆಯಲ್ಲಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ನೆಲೆಮಾವು ಮಠದ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ನೂರು, ಎನ್.ವಿ. ಹೆಗಡೆ ಮುತ್ತಿಗೆ, ವಿಶ್ವನಾಥ ಶೀಗೆಹಳ್ಳಿ, ಪ್ರಮೋದ್ ವೈದ್ಯ,ಜಿ.ಆರ್. ಹೆಗಡೆ ಬೆಳ್ಳೇಕೆರಿ, ಶಿವಾನಂದ ಕಳವೆ, ಎಂ.ಕೆ. ಭಟ್ ಯಡ್ಹಳ್ಳಿ, ರಾಘವೇಂದ್ರ ಭಟ್ಟ ಹಾಸಣಗಿ, ನರಸಿಂಹ ಸಾತೊಡ್ಡಿ ಹಾಗೂ ಜಿ.ಎನ್. ಹೆಗಡೆ ಕಣ್ಣಿಮನೆ ಅಭಿಪ್ರಾಯ ಹಂಚಿಕೊಂಡರು. ಸುರೇಶ ಹಕ್ಕಿಮನೆ ಸ್ವಾಗತಿಸಿ, ಅನಂತ ಭಟ್ ಹುಳಗೋಳ ವಂದಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !