ಹೊಸದಿಗಂತ ವರದಿ ಚಿತ್ರದುರ್ಗ:
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಾಹಿತ್ಯ ಮನಸ್ಸುಳ್ಳ ಜಾಣಗೆರೆ ವೆಂಕಟರಾಮಯ್ಯ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಹಾಗೂ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿನ ಅಧ್ಯಕ್ಷರು ಅಧಿಕಾರಕ್ಕೆ ಬಂದ ಮೇಲೆ ದ್ವಾರದಲ್ಲಿದ್ದ ಕನ್ನಡದ ಕಮಾನು ಕಿತ್ತು ಕನ್ನಡಿಗರಿಗೆ ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ. ಒಡೆಯರ್ ಪುತ್ಥಳಿ ತೆಗೆದು ಹಾಕಿ ಹೊರಗೆ ಇಡಲಾಗಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಕಸಾಪ ಭವಿಷ್ಯವನ್ನು ನಾಶಪಡಿಸಲಾಗಿದೆ. ಸದಸ್ಯತ್ವಗಳನ್ನು ಕಿತ್ತು ಹಾಕುವ ಮೂಲಕ ಸರ್ವಾಧಿಕಾರಿಯಂತೆ ವರ್ತಿಸಿದ ಅವರು ಮತ್ತೆ ಕಸಾಪ.ಗೆ ಕಾಲಿಡಬಾರದೆನ್ನುವ ಕಾರಣಕ್ಕಾಗಿ ಜಾಣಗೆರೆ ವೆಂಕಟರಾಮಯ್ಯನವರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಅಭ್ಯರ್ಥಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, 2025 ರಲ್ಲಿ ಹೋರಾಟವನ್ನು ಕೈಗೆತ್ತಿಕೊಂಡು ಅದ್ವಾನ, ಅನಾಹುತವಾಗುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ನ್ನು ಉಳಿಸಿದ್ದೇವೆ. ಇಲ್ಲದಿದ್ದರೆ ದಿಕ್ಕು ತಪ್ಪಿಸುವ ದಾರಿಗೆ ತೆಗೆದುಕೊಂಡು ಹೋಗುತ್ತಿದ್ದರು. ಮಹೇಶ್ಜೋಶಿರವರ ಮೂರುವರೆ ವರ್ಷದ ಅಧಿಕಾರವಧಿಯಲ್ಲಿ ಅಕ್ರಮ, ಅನ್ಯಾಯ ಲೂಟಿ ನಡೆದಿರುವ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಅಮಾನತ್ತುಗೊಂಡಿರುವ ಅವರ ಅಜೀವ ಸದಸ್ಯತ್ವವೇ ವಜಾ ಆಗುವ ಸಂಭವವಿದೆ. ಅವರಿಂದ ಹಣ ವಸೂಲಿ ಮಾಡಿ ಶಿಕ್ಷೆಗೊಳಪಡಿಸಬೇಕೆಂದು ಒತ್ತಾಯ ಎಂದರು.
ನವೆಂಬರ್ನಲ್ಲಿ ಪರಿಷತ್ನ ಅವಧಿ ಮುಗಿಯುತ್ತದೆ. ಡಿಸೆಂಬರ್ನಲ್ಲಿ ಚುನಾವಣೆ ಘೋಷಣೆಯಾಗಲಿರುವುದರಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪರಿಷತ್ನ ಸದಸ್ಯರುಗಳನ್ನು ಭೇಟಿಯಾಗಿ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸುವಂತೆ ಮನವಿ ಮಾಡಲಿದ್ದೇವೆ. ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಕನ್ನಡದ ಪ್ರಮುಖ ಕೃತಿಗಳನ್ನು ಪ್ರಕಟಿಸಿ ಕನ್ನಡಿಗರ ಕೈಗೆ ಅರ್ಪಿಸಿ ಕನ್ನಡಿಗರ ಹೆಮ್ಮೆಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಿಂಗಳಿಗೊಮ್ಮೆ ಪುಸ್ತಕ ಸಂತೆ ಏರ್ಪಡಿಸುತ್ತೇವೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದು ಸದಸ್ಯರುಗಳಲ್ಲಿ ವಿನಂತಿಸಿದರು.
ಆರ್.ಜಿ.ಹಳ್ಳಿ ನಾಗರಾಜ್ ಮಾತನಾಡಿ, 112 ವರ್ಷಗಳ ಇತಿಹಾಸವುಳ್ಳ ಕನ್ನಡ ಸಾಹಿತ್ಯ ಪರಿಷತ್ ಹನ್ನೆರಡು ವರ್ಷಗಳಿಂದ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಅಧ್ಯಕ್ಷ ಮಹೇಶ್ ಜೋಶಿ ಸರ್ವಾಧಿಕಾರಿಯಂತೆ ವರ್ತಿಸಿ ದರ್ಪ ತೋರುತ್ತಿದ್ದಾರೆ. ನಮಗೆ ಅನೇಕ ತಪ್ಪುಗಳು ಸಿಕ್ಕಿವೆ. ಪರಿಷತ್ನ ಘನತೆ ಗೌರವ ಉಳಿಸಬೇಕಾಗಿರುವುದರಿಂದ ಜಾಣಗೆರೆ ವೆಂಕಟರಾಮಯ್ಯನವರನ್ನು ಕಸಾಪ. ಚುನಾವಣೆಯಲ್ಲಿ ಗೆಲ್ಲಿಸುವ ಜವಾಬ್ದಾರಿ ಸದಸ್ಯರುಗಳ ಮೇಲಿದೆ ಎಂದು ನುಡಿದರು.
ನಿವೃತ್ತ ಪ್ರಾಚಾರ್ಯ ಪ್ರೊ.ಸಿ.ಕೆ.ಮಹೇಶ್ ಮಾತನಾಡಿ, ಬ್ರಾಹ್ಮಣ್ಯರ ರಾಷ್ಟ್ರವಾಗಿ ಭಾರತ ಪರಿವರ್ತನೆಯಾಗುತ್ತಿದೆ. ಎಲ್ಲರ ಬದುಕು ನಾಶವಾಗುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಬೇಕಾದಂತ ವಾತಾವರಣ ನಿರ್ಮಾಣವಾಗಿದೆ. ಸಾಹಿತ್ಯ ಜಂಗಮ, ಜಡತ್ವವನ್ನು ಹೊಂದಿದೆ. ಪಂಪನ ವಾಕ್ಯವುಳ್ಳ ಕಮಾನನ್ನು ಮಹೇಶ್ಜೋಶಿ ತೆಗೆದು ಹಾಕಿ ಕನ್ನಡಕ್ಕೆ ಅಗೌರವ ತೋರಿರುವುದು ಸಂವಿಧಾನದ ಆಶಯಕ್ಕೆ ಧಕ್ಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಿವೃತ್ತ ಪ್ರಾಚಾರ್ಯರಾದ ಡಾ.ಕರಿಯಪ್ಪ ಮಾಳಿಗೆ, ಪ್ರೊ.ಹೆಚ್.ಲಿಂಗಪ್ಪ, ಪ್ರಾಧ್ಯಾಪಕ ಚಿತ್ತಯ್ಯ ಹಾಜರಿದ್ದರು.



