August 26, 2026
Wednesday, August 26, 2026
spot_img

ಶಿಗ್ಗಾವಿ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ಭಿನ್ನ ಕೋಮಿನ ವ್ಯಕ್ತಿ ಕೃತ್ಯಕ್ಕೆ ಖಂಡನೆ: ಸ್ವಯಂ ಪ್ರೇರಿತ ಬಂದ್ ಯಶಸ್ವಿ

ಹೊಸದಿಗಂತ ವರದಿ ಹಾವೇರಿ:

ಶಿಗ್ಗಾವಿ ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ಭಿನ್ನ ಕೋಮಿನ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ್ದ ಘಟನೆ ಖಂಡಿಸಿ, ಬುಧವಾರ ಸ್ಥಳೀಯ ವ್ಯಾಪಾರಸ್ಥರು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣ ಸ್ಥಗಿತಗೊಳಿಸುವ ಮೂಲಕ ‘ಶಿಗ್ಗಾವಿ ಬಂದ್’ ಕರೆ ಯಶಸ್ವಿಗೊಳಿಸಿದ್ದಾರೆ.

ಹೂವು, ಔಷಧಿ ಇತರೇ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲ ರೀತಿಯ ಅಂಗಡಿಗಳು ಬಾಗಿಲು ಹಾಕಿದ್ದು ಕಂಡು ಬಂತು.  ಕೆಲ ಬೈಕ್, ಅಟೋಗಳಿಗೆ ಈದ್ ಮೀಲಾದ್ ಹಬ್ಬದ ಬ್ಯಾನರ್ ಕಟ್ಟಿಕೊಂಡು ಸಂಚರಿಸಿದ್ದು ಬಿಟ್ಟರೆ, ಶಿಗ್ಗಾಂವಿ ಬಂದ್ ಬಹುತೇಕ ಶಾಂತಿಯುತವಾಗಿ ಎಲ್ಲಿಯೂ ಗೊಂದಲವಿಲ್ಲದೇ ನಡೆದಿದ್ದು ಗಮನ ಸೆಳೆಯಿತು.

ವಿರೋಧ ನಡುವೆಯೂ ಯಶಸ್ವಿ:

ಘಟನೆ ನಡೆದ ದಿನದಂದು ದೇವಸ್ಥಾನಕ್ಕೆ ಬಂದು ಶುದ್ಧೀಕರಣ ನಡೆಸಿ, ದರುಶನ ಪಡೆದುಕೊಂಡಿದ್ದ ಶ್ರೀರಾಮ ಸೇನಾ ಅಧ್ಯಕ್ಷ ಪ್ರಮೋದ ಮುತಾಲಿಕ್, ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು. ಅಲ್ಲದೇ ಸ್ಥಳೀಯರು ಶಿಗ್ಗಾವಿ ಬಂದ್ ಕರೆ ನೀಡಿದ್ದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ನಂತರ ಸಂಸದ ಬಸವರಾಜ ಬೊಮ್ಮಾಯಿ ಸಹ ದೇವಸ್ಥಾನಕ್ಕೆ ಭೇಟಿ ನೀಡಿ ದೇವರು ದರುಶನ ಪಡೆದು, ಬಂದ್ ಕರೆಗೆ ಬೆಂಬಲಿಸಿದ್ದರು. ಅಲ್ಲದೇ ಶಾಂತಿಯುತ ಬಂದ್‌ಗೆ ಎಲ್ಲರೂ ಬೆಂಬಲಿಸುವಂತೆ ಕೋರಿದ್ದರು.

ಪರವಾನಿಗೆ ಇಲ್ಲ

ಇಂದು ಈದ್ ಮಿಲಾದ್ ಹಿನ್ನೆಲೆಯಲ್ಲಿ ಬಂದ್‌ಗೆ ಪೊಲೀಸ್ ಇಲಾಖೆ ಪರವಾನಿಗೆ ನೀಡಲ್ಲ ಎಂದು ಸ್ಪಷ್ಟಪಡಿಸಿತ್ತು. ಇದರ ನಡುವೆಯೂ ಬೆಳಿಗ್ಗೆಯಿಂದ ಸಂಜೆವರೆಗೂ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ ಕರೆ ಯಶಸ್ವಿಗೊಳಿಸಿದರು. ಬಂದ್‌ನಿಂದಾಗಿ ಗ್ರಾಮೀಣ ಜನರಿಗೆ ಒಂದಷ್ಟು ಸಮಸ್ಯೆಯಾಗಿದ್ದು ಬಿಟ್ಟರೇ, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ಇದನ್ನೂ ಓದಿ:

ಪೊಲೀಸ್ ಬಂದೋಬಸ್ತ್

ಡಿವೈಎಸ್ಪಿ ಗುರುಶಾಂತಪ್ಪ ನೇತೃತ್ವದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಾತ್ರ ಹೆಜ್ಜೆ, ಹೆಜ್ಜೆಗೂ ಕಣ್ಗಾವಲಾಗಿದ್ದರು. ಎಸ್ಪಿ ಯಶೋಧಾ ವಂಟಗೋಡಿ ಸೇರಿದಂತೆ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !