August 28, 2026
Friday, August 28, 2026
spot_img

ಅನುಭವಿಸಿದವರಿಗೇ ಗೊತ್ತು ಮೈಗ್ರೇನ್ ನೋವು: ಏನಿದು? ಯಾಕಿದು? ಚಿಕಿತ್ಸೆ ಇದೆಯಾ? ಹೇಗೆ?

ಮೈಗ್ರೇನ್ ತಲೆನೋವು ಅನುಭವಿಸಿದವರಿಗಷ್ಟೇ ಗೊತ್ತು ಮೈಗ್ರೇನ್ ತಲೆನೋವಿನ ನರಳಾಟ. ಅತಿಯಾದ ತಲೆ ನೋಯುವುದರ ಜೊತೆಗೆ ವಾಕರಿಕೆ, ಶಬ್ದ ಅಸಹಿಷ್ಣುತೆ, ಕಣ್ಣಿನಲ್ಲಿ ಮಿಂಚಿನಂತೆ ಬೆಳಕಿನ ದರುಶನ ಹೀಗೆ ಹಲವು ಲಕ್ಷಣಗಳಿಂದ ಮೈಗ್ರೈನ್ ಕೂಡಿರುತ್ತದೆ. ಸಾಮಾನ್ಯವಾಗಿ ಅರ್ಧ ತಲೆ ನೋವು ಅಥವಾ ಪೂರ್ಣ ಶಿರಸ್ಸಿನಲ್ಲಿ ನೋವು ಉಂಟಾಗಬಹುದು. ಮೈಗ್ರೇನ್ ತಲೆನೋವು ಇಂತಿಷ್ಟೇ ದಿನಗಳಿಗೆಗೊಮ್ಮೆ ಎಂಬಂತೆ ಮರುಕಳಿಸುವುದು ಇದರ ವಿಶೇಷತೆ.

ಸಾಮಾನ್ಯ ಕಾರಣಗಳು:

ಮೈಗ್ರೇನ್ ತಲೆನೋವಿಗೆ ಹಲವಾರು ಕಾರಣಗಳಿವೆ. ದೂರ ಪ್ರಯಾಣದ ಸಂದರ್ಭಗಳಲ್ಲಿ ಮಲ ಮೂತ್ರಗಳ ವೇಗ ಧಾರಣೆಯಿಂದ ತಲೆನೋವು ಬರುವ ಸಾಧ್ಯತೆ ಹೆಚ್ಚು. ರಾತ್ರಿ ನಿದ್ದೆ ಬಿಡುವುದರಿಂದ ಅಥವಾ ಹಗಲಿನಲ್ಲಿ ಮಲಗುವುದರಿಂದ, ದೊಡ್ಡ ಸ್ವರದಲ್ಲಿ ದೀರ್ಘ ಕಾಲ ಭಾಷಣದಿಂದ, ಮಂಜಿನಲ್ಲಿ ನೆನೆಯುದರಿಂದ, ತೀಕ್ಷ್ಣವಾದ ಗಂಧದ್ರವಗಳ ವಾಸನೆಯಿಂದ, ಅತಿಯಾದ ಬಿಸಿಲಿನಲ್ಲಿ ಓಡಾಟ ಮಾಡುವುದರಿಂದ, ಬಿಸಿಲಿಂದ ಬಂದ ತಕ್ಷಣ ಫ್ರಿಡ್ಜ್ ನ ತಣ್ಣನೆ ನೀರು ಸೇವಿಸುವುದರಿಂದ, ಸುಲಭವಾಗಿ ಜೀರ್ಣವಾಗದ ಆಹಾರಗಳ ಅತಿಯಾದ ಬಳಕೆ, ಅತಿಯಾದ ಮಾನಸಿಕ ಒತ್ತಡದಿಂದ ಹಾಗೂ ತಲೆಗೆ ಪೆಟ್ಟಾಗುವುದರಿಂದ ಹೀಗೆ ಹಲವಾರು ಕಾರಣಗಳಿಂದ ಮೈಗ್ರೇನ್ ತಲೆನೋವು ಬರಬಹುದು.

ಮೈಗ್ರೇನ್ ತಲೆನೋವು ಇರುವವರು ಅತಿಯಾದ ಉಪ್ಪು ಹುಳಿ ಖಾರ, ಕರಿದ ಪದಾರ್ಥ, ಮೊಸರು ಇವುಗಳನ್ನು ತ್ಯಜಿಸಿದರೆ ತಲೆನೋವಿನ ತೀವ್ರತೆ ಹಾಗು ಪುನರಾವರ್ತನೆಯನ್ನು ಕಡಿಮೆ ಮಾಡಿಕೊಳ್ಳಬಹುದು.

ಚಿಕಿತ್ಸೆ‌ ಏನು?

ಮೈಗ್ರೈನ್ ಪ್ರಾರಂಭವಾಗಿ ಹೆಚ್ಚು ಸಮಯವಾಗಿಲ್ಲದ ಪಕ್ಷದಲ್ಲಿ ಸುಲಭ ಹಾಗು ಸರಳವಾದ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಮೇಲೆ ಹೇಳಿರುವ ಕಾರಣಗಳನ್ನು ಬಿಡುವುದು ಚಿಕಿತ್ಸೆಯ ಮೊದಲ ಭಾಗ, ಅಗತ್ಯಕ್ಕೆ ಅನುಗುಣವಾಗಿ ಜೀವನ ಶೈಲಿಯನ್ನು ಸೂಕ್ತ ರೀತಿಯಲ್ಲಿ ಬದಲಾಯಿಸಿಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಅತಿಯಾದ ದುಃಖ ಹಾಗು ಮಾನಸಿಕ ಒತ್ತಡ ತಲೆನೋವನ್ನು ಉಲ್ಬಣಿಸಬಹುದು. ಕಾರಣಗಳಿಗನುಸಾರವಾಗಿ ರೋಗಿಯ ದೇಹ ಪ್ರಕೃತಿಗನುಸಾರವಾಗಿ ಚಿಕಿತ್ಸೆ ನೀಡುವುದರಿಂದ ರೋಗವನ್ನು ನಿಯಂತ್ರಿಸಬಹುದು. ಶಿರಸ್ಸಿಗೆ ಪ್ರತ್ಯೇಕವಾಗಿ ನೀಡುವಂತಹ ಚಿಕಿತ್ಸೆಗಳಾದ ನಸ್ಯ, ಶಿರೊ ವಸ್ತಿ, ಮೂರ್ಧನ್ಯಗಳಿಂದ ಮೈಗ್ರೈನ್ ತಲೆನೋವನ್ನು ಆಯುರ್ವೇದದಲ್ಲಿ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದಾಗಿದೆ.

ಶಿರಸ್ಸನ್ನು ಮಾನವ ದೇಹದ ಮೂಲಭಾಗವೆಂದು ಹೇಳಿದ್ದಾರೆ, ಶಿರಸ್ಸು ಪ್ರಾಣದ ವಿಶೇಷಸ್ಥಾನವಾಗಿದೆ ಇದರ ಆರೈಕೆ ಹಾಗು ರಕ್ಷಣೆ ಆರೋಗ್ಯಕರ ಜೀವನಕ್ಕೆ ಅತ್ಯಗತ್ಯ.

ಲೇಖಕರು:
ಡಾ. ಸುಹಾಸ್ ಹೆಚ್. ಡಿ.
ಮುಖ್ಯ ವೈದ್ಯಾಧಿಕಾರಿಗಳು, ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆ, ಶೃಂಗೇರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !