August 28, 2026
Friday, August 28, 2026
spot_img

ನಿಧಾನಕ್ಕೆ ಮೇಲೇಳುವ ಪ್ರಯತ್ನ ಮಾಡ್ತಿದ್ದಾರೆ ನೇಪಾಳದ ಜನ: ಆದರೆ ಸಮಸ್ಯೆ ಒಂದೆರಡಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬದುಕು ಎಷ್ಟೊಂದು ಬಾರಿ ತಳ್ಳಿ ತಳ್ಳಿ ನೆಲಕ್ಕೆ ಕೆಡವಿದರೂ, ಕೆಸರು ಒರೆಸಿಕೊಂಡು ಏಳಲೇಬೇಕು. ನಿಧಾನವಾದ್ರೂ ಪರವಾಗಿಲ್ಲ ಆದರೆ ಏಳಲೇಬೇಕು! ಇದು ಬರೀ ಮಾತಲ್ಲ ನೇಪಾಳ ಜನತೆಯ ಅಕ್ಷರಃ ಸ್ಥಿತಿ.
ನೆಮ್ಮದಿಯಾಗಿ ಕುಳಿತು ಕಾಫಿ ಹೀರುತ್ತಿದ್ದ ಕುಟುಂಬ ತನ್ನ ಮನೆಯಿಂದ ನೂರಾರು ಕಿಲೋಮೀಟರ್‌ ದೂರದಲ್ಲಿ ಶವವಾಗಿ ಬಿದ್ದಿದೆ. ಆಡಿ ಬೆಳೆದ, ಜೀವನ ಮಾಡಿದ ಓಣಿ, ರಸ್ತೆ ಯಾವುದೂ ಈಗ ಉಳಿದಿಲ್ಲ. ಎಲ್ಲವೂ ಇನ್ನು ನೆನಪು ಮಾತ್ರ..

ಪ್ರಾಣ ಉಳಿದದ್ದೇ ಹೆಚ್ಚು

ಭೀಕರ ಪ್ರಕೃತಿ ವಿಕೋಪದ ನಂತರ ನೇಪಾಳ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹಿಮಾಲಯದ ಗಡಿ ಭಾಗದಲ್ಲಿ ಭೂಕಂಪ ಹಾಗೂ ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹವು 400ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ. ಪ್ರವಾಹದ ಭಯದಿಂದಾಗಿ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದ ಜನರು ಇದೀಗ ತಮ್ಮ ಮನೆಗಳತ್ತ ವಾಪಾಸ್‌ ಮುಖ ಮಾಡಿದ್ದಾರೆ. ಮನೆಯ ಪರಿಸ್ಥಿತಿ ಕಂಡು ಕಣ್ಣೀರಾಗಿದ್ದಾರೆ. ಎಷ್ಟೋ ಜನರು ತಮ್ಮ ಜೀವವನ್ನು, ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಜನರನ್ನು ಕಳೆದುಕೊಂಡಿದ್ದಾರೆ. ಅವರ ಮುಂದೆ ನಮ್ಮ ದುಃಖ ಶೂನ್ಯ ಎಂದು ಗಟ್ಟಿ ಮನಸ್ಸು ಮಾಡಿಕೊಂಡು ಮನೆಯ ಬಾಗಿಲುಗಳನ್ನು ತೆಗೆಯುತ್ತಿದ್ದಾರೆ. ಮನೆಯ ಬಾಗಿಲನ್ನು ತೆಗೆದ ತಕ್ಷಣವೇ ಮಣ್ಣು, ನೀರು ಹೊರಕ್ಕೆ ಬರುತ್ತಿದೆ.

ಪ್ರವಾಸಿಗರು ಸುರಕ್ಷಿತ

ನೇಪಾಳದ ರಾಜಧಾನಿ ಕಠ್ಮಂಡು ಹಾಗೂ ಪೋಖರಾ, ನಗರ್‌ಕೋಟ್‌ನಂತರ ಪ್ರಮುಖ ಸ್ಥಳಗಳಿಗೆ ಯಾವುದೇ ಹಾನಿಯಾಗಿಲ್ಲ. ಅಲ್ಲಿರುವ ಪ್ರವಾಸಿ ತಾಣಗಳು ಹಾಗೂ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಟಿಬೆಟ್‌ ಗಡಿಗೆ ಹೊಂದಿಕೊಂಡಿರುವ ರಸುವಾ ಮತ್ತು ಭೋಟೆಕೋಶೆ ನದಿ ಪಾತ್ರದಲ್ಲಿ ಮಾತ್ರ ಪ್ರವಾಹವಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕೊಚ್ಚಿ ಹೋಗಿರುವ ರಸ್ತೆಗಳು, ಸಂಪರ್ಕ ಸೇತುವೆಗಳು, ಕರೆಂಟ್‌ ಲೈನ್‌, ಇಂಟರ್‌ನೆಟ್‌ ಹಾಗೂ ಅಗತ್ಯ ವಸ್ತುಗಳನ್ನು ನೀಡಲು ಸರ್ಕಾರಿ ಸಂಸ್ಥೆಗಳು ಶ್ರಮ ಹಾಕಿವೆ.

ಮನೆಯಲ್ಲಿ ಅನ್ನ ನೀರು ಕೂಡ ಇಲ್ಲದಂತಾಗಿದ್ದು, ಮುಂದೇನು ಮಾಡಬೇಕು? ಎಲ್ಲಿಂದ ಜೀವನ ಆರಂಭಿಸಬೇಕು ತಿಳಿಯದೇ ನೇಪಾಳದ ಜನ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಸರ್ಕಾರದ ಪ್ರಯತ್ನ ಹಾಗೂ ಸಾರ್ವಜನಿಕರ ಸಹಾಯದಿಂದ ನೇಪಾಳ ಶೀಘ್ರವೇ ಮೊದಲಿನಂತಾಗುತ್ತದೆ. ಎಲ್ಲದಕ್ಕೂ ಸಮಯ ಬೇಕಷ್ಟೇ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !