August 28, 2026
Friday, August 28, 2026
spot_img

ರಕ್ಷಾಬಂಧನ ಸಂಭ್ರಮ: ಸಹೋದರ-ಸಹೋದರಿಯರ ಪ್ರೀತಿ, ವಿಶ್ವಾಸದ ಬಂಧಕ್ಕೆ ಗಣ್ಯರ ಸ್ಪೆಷಲ್ ಶುಭಾಶಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಡೀ ದೇಶದಾದ್ಯಂತ ‘ರಕ್ಷಾಬಂಧನ’ದ ಸಂಭ್ರಮ ಮನೆಮಾಡಿದೆ. ಈ ವಿಶೇಷ ದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶ-ವಿದೇಶದಲ್ಲಿರುವ ಭಾರತೀಯರಿಗೆ ಶುಭಾಶಯ ಕೋರಿದ್ದಾರೆ.

ಆಧ್ಯಾತ್ಮಿಕ ಪರಂಪರೆಯ ಒಂದು ಭಾಗ

ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಶೇಷ ಸಂದೇಶವನ್ನು ಹಂಚಿಕೊಂಡಿರುವ ರಾಷ್ಟ್ರಪತಿ ಮುರ್ಮು, ರಕ್ಷಾಬಂಧನ ಹಳೆಯ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಪ್ರಮುಖ ಆಧ್ಯಾತ್ಮಿಕ ಪರಂಪರೆಯ ಒಂದು ಭಾಗವಾಗಿದೆ. ಸಹೋದರ-ಸಹೋದರಿಯರ ನಡುವಿನ ಪ್ರೀತಿ ಸಂಬಂಧ ಕೊನೆವರೆಗೂ ಉಳಿಯುವಂತೆ ಮಾಡುವ ಪ್ರಮುಖ ಸಾಮಾಜಿಕ ಆಚರಣೆಯಾಗಿ ಬೆಳೆದು ಬಂದಿದೆ ಎಂದರು.

ರಕ್ಷಾ ಬಂಧನ ಹೇಗೆ ಒಂದು ಕುಟುಂಬ ಹಾಗೂ ಸಮಾಜದಲ್ಲಿ ಪ್ರೀತಿ, ಗೌರವ ಮತ್ತು ಪರಸ್ಪರ ಜವಾಬ್ದಾರಿಯ ಭಾವನೆಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆಯೋ ಅದೇ ರೀತಿ ರಾಷ್ಟ್ರವನ್ನು ರಕ್ಷಿಸಲು ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಅದೇ ಮನೋಭಾವದಿಂದ ಮುಂದುವರಿಯುವ ಸಂಕಲ್ಪ ಮಾಡಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ದೇಶದ ಜನತೆಗೆ ರಕ್ಷಾಬಂಧನದ ಶುಭಾಶಯಗಳನ್ನು ತಿಳಿಸಿದ್ದು, ರಕ್ಷಾಬಂಧನದ ಮೂಲಕ ಪ್ರೀತಿ, ಬಾಂಧವ್ಯ ಮತ್ತು ಒಗ್ಗಟ್ಟಿನ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಲಿ ಎಂದು ಹೇಳಿದ್ದಾರೆ.

ಸಂತೋಷ, ಸಮೃದ್ಧಿ, ಯಶಸ್ಸನ್ನು ತರಲಿ

ಪ್ರಧಾನಿ ನರೇಂದ್ರ ಮೋದಿ ಅವರು, ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಾತ್ಸಲ್ಯ ಮತ್ತು ಪರಸ್ಪರ ನಂಬಿಕೆ ಸದಾ ಗಟ್ಟಿಯಾಗಿರಲಿ. ಈ ಹಬ್ಬ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ತರಲಿ ಎಂದು ಶುಭ ಕೋರಿದ್ದಾರೆ.

ದಾರ ಕಟ್ಟೋದು ಮಾತ್ರ ಅಲ್ಲ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕೂಡ ದೇಶವಾಸಿಗಳಿಗೆ ರಕ್ಷಾಬಂಧನದ ಶುಭಾಶಯ ತಿಳಿಸಿದ್ದು, ರಕ್ಷಾ ಬಂಧನ ಅನ್ನೋದು ಕೇವಲ ರಕ್ಷಣೆಗೆ ಒಂದು ದಾರವನ್ನು ಕಟ್ಟೋದು ಮಾತ್ರವಲ್ಲ, ಬದಲಾಗಿ ನಂಬಿಕೆ, ಗೌರವ, ಪ್ರೀತಿ ಮತ್ತು ಪರಸ್ಪರ ಜೀವಮಾನವಿಡೀ ನಿನ್ನ ರಕ್ಷಣೆಗೆ ನಿಲ್ಲುವ ಬದ್ಧತೆಯ ಆಚರಣೆಯಾಗಿದೆ ಎಂದರು.

ನಮ್ಮ ಸಂಸ್ಕೃತಿ ಕೇವಲ ತನ್ನ ಸಹೋದರಿಯ ಸುರಕ್ಷತೆಯನ್ನ ಮಾತ್ರ ನೋಡಿಕೊಳ್ಳುವುದಲ್ಲ ಪ್ರತಿಯೊಬ್ಬ ಹೆಣ್ಣು ಮಗಳ ಘನತೆ ಗೌರವ ಹಕ್ಕನ್ನು ರಕ್ಷಿಸುವ ಒಂದು ಹಬ್ಬ ಎಂದು ಹೇಳಿದರು. ಜೊತೆಗೆ ನಮ್ಮ ಈ ಸಮಾಜದಲ್ಲಿ ಪ್ರತಿಯೊಬ್ಬ ಹೆಣ್ಣು ಮಗಳು ಸುರಕ್ಷಿತ ಹಾಗೂ ಆತ್ಮವಿಶ್ವಾಸದಿಂದ ಮುಂದುವರೆಯಲು ಸಾಧ್ಯವಾದಾಗ ಮಾತ್ರ ನಮ್ಮ ರಾಷ್ಟ್ರ ನಿಜವಾಗ್ಲೂ ಬಲಿಷ್ಠ ವಾಗೋದಕ್ಕೆ ಸಾಧ್ಯ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !