August 29, 2026
Saturday, August 29, 2026
spot_img

ಮಕ್ಕಳಲ್ಲಿ ಪ್ರಶ್ನೆ ಮಾಡುವ ಮನೋಭಾವ, ನಾಯಕತ್ವ ಗುಣ ಮೂಡಲಿ: ಡಾ.ನಾಗಲಕ್ಷ್ಮಿ ಚೌಧರಿ

ಹೊಸದಿಗಂತ ವರದಿ ರಾಮನಗರ:

ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಮಕ್ಕಳು ಅರಿವನ್ನು ಹೊಂದಿ, ಸಮಾಜದಲ್ಲಿನ ಆಗು-ಹೋಗುಗಳನ್ನು ಗಮನಿಸಿ, ಸಮಸ್ಯೆಗಳ ಕುರಿತು ಪ್ರಶ್ನೆ ಮಾಡುವ, ಮನೋಭಾವವನ್ನು ಬೆಳೆಸಿಕೊಂಡು, ಉತ್ತಮ ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಭವಿಷ್ಯದ ಸ್ವಾಭಿಮಾನಿ ಪ್ರಜೆಗಳಾಗಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದರು.

ಬಿಡದಿಯ ತ್ಯಾಗರಾಜು ಸೆಂಟ್ರಲ್ ಶಾಲೆಯಲ್ಲಿ ಜಿಲ್ಲಾಡಳಿತ, ಕಾನೂನು ಸೇವಾ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ರೋಟರಿ ಬಿಡದಿ ಸೆಂಟ್ರಲ್ ವತಿಯಿಂದ ಆಯೋಜಿಸಲಾಗಿದ್ದ ಬಿಡದಿ ಹೋಬಳಿ ಮಕ್ಕಳ ಸಂರಕ್ಷಣೆ ಹಾಗೂ ಕಾನೂನು ಬಲವರ್ಧನೆಯ ಕಾರ್ಯಗಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ. ಬಿ.ಆರ್.ಅಂಬೇಡ್ಕರ್ ಅವರು ತಿಳಿಸಿದಂತೆ ಶಿಕ್ಷಣ ಇದ್ದವರು, ಸಂಘಟನೆ ಮಾಡಿ, ಹೋರಾಟದ ಮೂಲಕ ಸಮಾಜದ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ನಮ್ಮದು ಗುಲಾಮಗಿರಿಯ ಬದುಕಾಗಿರದೇ, ಸ್ವಾಭಿಮಾನದ ಬದುಕಾಗಿರಬೇಕು. ಅವರ ನುಡಿಯಂತೆ ಇಂದಿನ ಮಕ್ಕಳು, ಮುಂದಿನ ಗುಲಾಮಗಿರಿ ಪ್ರಜೆಗಳಾಗದೇ, ಸ್ವಾಭಿಮಾನದ ಪ್ರಜೆಗಳಾಗಬೇಕು, ಭವಿಷ್ಯದ ರೂವಾರಿಗಳಾಗಬೇಕು ಎಂದರು.

18 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವಂತಿಲ್ಲ. ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿರಬೇಕು. ಅವಶ್ಯಕತೆಗಷ್ಟೇ ಮಾತ್ರ ಮೊಬೈಲ್ಅನ್ನು ಬಳಸಬೇಕು. ಜೈವಿಕ ಸಹಜ ಕ್ರಿಯೆಯಾದ ಹಾರ್ಮೋನುಗಳ ವ್ಯತ್ಯಾಸದಿಂದಾಗಿ ಪ್ರೌಢಾವಸ್ಥೆಯ ಮಕ್ಕಳಲ್ಲಿ ಮನಸ್ಸಿನ ಚಂಚಲತೆ ಉಂಟಾಗುತ್ತದೆ. ವಿದ್ಯಾರ್ಥಿ ಜೀವನವು ಮಹತ್ವದ ಘಟ್ಟವಾಗಿದ್ದು, ಪ್ರೀತಿ-ಪ್ರೇಮ ಹಾಗೂ ಯಾವುದೇ ವ್ಯಸನಗಳು, ದುಶ್ಚಟಗಳಿಗೆ ಬಲಿಯಾಗದೇ, ಎಷ್ಟೇ ಸೋಲುಗಳು ಎದುರಾದರೂ ಮತ್ತೆ-ಮತ್ತೆ ಪ್ರಯತ್ನಿಸುವ ಮೂಲಕ ಓದಿನತ್ತ ಗಮನ ಕೇಂದ್ರೀಕರಿಸಿ, ಸತತ ಕಠಿಣ ಪರಿಶ್ರಮದಿಂದ ತಮ್ಮ ಗುರಿ ಸಾಧಿಸಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಪ್ರತಿಯೊಬ್ಬರೂ ತಾವು ಬದುಕಿರುವವರೆಗೂ ನಾಲ್ಕು ಸಹಾಯವಾಣಿ ಸಂಖ್ಯೆಗಳಾದ ಮಕ್ಕಳ ಸಹಾಯವಾಣಿ ಸಂಖ್ಯೆ: 1098, ಮಹಿಳಾ ಸಹಾಯವಾಣಿ ಸಂಖ್ಯೆ: 181, ಪೊಲೀಸ್ ಸಹಾಯವಾಣಿ ಸಂಖ್ಯೆ: 112 ಹಾಗೂ ಮೊಬೈಲ್ ಅಥವಾ ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆ: 1930 ಅನ್ನು ನೆನಪಿಟ್ಟುಕೊಂಡು ತೊಂದರೆಗಳುಂಟಾದಾಗ ತಕ್ಷಣ ಕರೆ ಮಾಡಿ, ಸಹಾಯ ಪಡೆಯಬೇಕು ಎಂದರು.

ಇದನ್ನೂ ಓದಿ:

ಬಿಡದಿ ಆರಕ್ಷಕ ನಿರೀಕ್ಷಕ ವಿಜಯಕುಮಾರ್ ಮಾತನಾಡಿ ಭವಿಷ್ಯದ ಪ್ರಜೆಗಳಾದ ಮಕ್ಕಳು ವ್ಯಸಗಳಿಗೆ ಒಳಗಾಗಿ ಸಮಾಜದಲ್ಲಿ ತಲೆ ತಗ್ಗಿಸುವಂತಾಗಬಾರದು. ಉತ್ತಮ ನಾಗರೀಕರಾಗಬೇಕು. ಬ್ಯಾಡ್ ಟಚಿಂಗ್, ಗುಡ್ ಟಚಿಂಗ್ ಬಗ್ಗೆ ಅರಿವಿರಬೇಕು. ಮಾದಕ ವಸ್ತುಗಳ ಬಳಕೆ ಕಂಡುಬಂದಲ್ಲಿ ಮಾಹಿತಿ ನೀಡಬೇಕು. ದೌರ್ಜನ್ಯ ನಡೆದರೆ, ಶಿಕ್ಷಕರಿಗೆ, ಪೋಷಕರಿಗೆ ಮೊದಲು ತಿಳಿಸಬೇಕು. ಪೊಲೀಸರು ಪೋಕ್ಸೋ ಕಾಯಿದೆಯಡಿ ಕಾನೂನು ಕ್ರಮ ವಹಿಸಲಿದ್ದಾರೆ ಎಂದು ತಿಳಿಸಿದರು.

ರೂಟ್ಸ್ ಎಜುಕೇಶನ್ ಹಾಗೂ ಸ್ಕಿಲ್ ಫ್ಲಿಕ್ಸ್ ಸಂಸ್ಥೆಗಳ ಸಂಸ್ಥಾಪಕ ವಿನಯ್ ಪಾಟೀಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಐಸಿಡಿಎಸ್ನ ಜಿಲ್ಲಾ ನಿರೂಪಣಾಧಿಕಾರಿ ಲಕ್ಷ್ಮೀದೇವಿ, ಜಿಲ್ಲಾ ಪಾಲಕರಾದ ರೋ. ಅನಿಲ್ ಗುಪ್ತ, ರೋಟರಿ ಬಿಡದಿ ಸೆಂಟ್ರಲ್ ಅಧ್ಯಕ್ಷ ರೋ. ಕೃಷ್ಣ, ಕಾರ್ಯದರ್ಶಿ ರೋ. ರಮೇಶ್ ಕೆ.ಎನ್., ನಿರ್ದೇಶಕ ರೋ. ಸಂದೀಪ್ ಸಿ.ಎಸ್., ಶಾಲಾ ಮುಖ್ಯೋಪಾದ್ಯಾಯೆ ವಿಜಯಲಕ್ಷ್ಮೀ ಹಾಗೂ ಇತರರು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !