August 30, 2026
Sunday, August 30, 2026
spot_img

ನೇಪಾಳದಲ್ಲಿ ಪ್ರವಾಹ ಬಿಕ್ಕಟ್ಟು ತೀವ್ರ: ಮೃತರ ಸಂಖ್ಯೆ 675 ಕ್ಕೆ ಏರಿಕೆ; 4,400ಕ್ಕೂ ಹೆಚ್ಚು ಜನರ ರಕ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳದ ರಸುವಾ ಜಿಲ್ಲೆಯ ಭೋಟೆಕೋಶಿ ನದಿ ತೀರದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇತ್ತೀಚಿನ ಮಾಹಿತಿಯ ಪ್ರಕಾರ ಮೃತರ ಸಂಖ್ಯೆ 675ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ.

ಎನ್‌ಡಿಆರ್‌ಆರ್‌ಎಂಎ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ 2,400 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, 4,400ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಲಾಗಿದೆ.

ಚಿಟ್ವಾನ್‌ನಲ್ಲಿ ಅತಿ ಹೆಚ್ಚು ಸಾವು

ಚಿಟ್ವಾನ್ ಜಿಲ್ಲೆಯಲ್ಲಿ ಅತಿ ಹೆಚ್ಚು 246 ಮಂದಿ ಮೃತಪಟ್ಟಿದ್ದು, ನವಲ್‌ಪರಾಸಿ ಪೂರ್ವದಲ್ಲಿ 165, ನವಲ್‌ಪರಾಸಿ ಪಶ್ಚಿಮದಲ್ಲಿ 63, ಗೋರಖಾದಲ್ಲಿ 57, ನುವಾಕೋಟ್‌ನಲ್ಲಿ 51, ಧಾದಿಂಗ್‌ನಲ್ಲಿ 45, ತನಹುನ್‌ನಲ್ಲಿ 35 ಹಾಗೂ ರಸುವಾದಲ್ಲಿ 13 ಸಾವುಗಳು ವರದಿಯಾಗಿವೆ.

ಇದನ್ನೂ ಓದಿ:

2,426 ಮಂದಿ ನಾಪತ್ತೆ

ಇನ್ನು 2,426 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ ಭೂಗತ ಜಲವಿದ್ಯುತ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ 933 ಕಾರ್ಮಿಕರು, 589 ವಿದೇಶಿ ನಾಗರಿಕರು ಹಾಗೂ ವಿದೇಶಿ ಪ್ರವಾಸಿಗರೊಂದಿಗೆ ಪ್ರಯಾಣಿಸುತ್ತಿದ್ದ 127 ನೇಪಾಳಿ ನಾಗರಿಕರು ಸೇರಿದ್ದಾರೆ. ಭದ್ರತಾ ಹಾಗೂ ಸರ್ಕಾರಿ ಇಲಾಖೆಗಳ 104 ಸಿಬ್ಬಂದಿಯೂ ನಾಪತ್ತೆಯಾಗಿದ್ದಾರೆ.

ರಸುವಾದಲ್ಲೇ 562 ಮಂದಿ ನಾಪತ್ತೆ

ರಸುವಾದಲ್ಲಿ 562 ಹಾಗೂ ನುವಾಕೋಟ್‌ನಲ್ಲಿ 115 ಮಂದಿ ನಾಪತ್ತೆಯಾಗಿದ್ದಾರೆ. ಮಕ್ವಾನ್‌ಪುರದಲ್ಲಿ 65 ಮಂದಿ ನಾಪತ್ತೆಯಾಗಿರುವ ವರದಿಯಾಗಿದೆ. ಇಷ್ಟೇ ಅಲ್ಲದೆ ನೇಪಾಳ ಸೇನೆಯ 45, ನೇಪಾಳ ಪೊಲೀಸರ 27, ಸಶಸ್ತ್ರ ಪೊಲೀಸ್ ಪಡೆಯ 13, ಕಸ್ಟಮ್ಸ್ ಇಲಾಖೆಯ 15 ಹಾಗೂ ವಲಸೆ ಇಲಾಖೆಯ ನಾಲ್ವರು ಸಿಬ್ಬಂದಿಯೂ ನಾಪತ್ತೆಯಾಗಿದ್ದಾರೆ.

ಭೋಟೆಕೋಶಿ ನದಿಯಲ್ಲಿ ಹಠಾತ್ ಪ್ರವಾಹ

ಆಗಸ್ಟ್ 26ರಂದು ರಸುವಾ ಜಿಲ್ಲೆಯ ಭೋಟೆಕೋಶಿ ನದಿ ತೀರದಲ್ಲಿ ಏಕಾಏಕಿ ಉಂಟಾದ ಪ್ರವಾಹ ಭಾರೀ ಪ್ರಮಾಣದ ನೀರು ಮತ್ತು ಮಣ್ಣನ್ನು ಕೆಳಭಾಗಕ್ಕೆ ತಳ್ಳಿದ್ದು, ನುವಾಕೋಟ್, ಧಾದಿಂಗ್, ಚಿಟ್ವಾನ್ ಸೇರಿದಂತೆ ಹಲವು ಜಿಲ್ಲೆಗಳಿಗೆ ಭಾರೀ ಹಾನಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !