August 31, 2026
Monday, August 31, 2026
spot_img

ಹಫ್ತಾ ಲೆಕ್ಕಾಚಾರ ಬಯಲು: ಹಳಿಯಾಳ ಠಾಣೆಯ ಮೂವರು PSIಗಳು ಸಸ್ಪೆಂಡ್

ಹೊಸದಿಗಂತ ವರದಿ ಕಾರವಾರ:

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಮುಖ ಹುದ್ದೆಗಳನ್ನು ಪಡೆಯಲು ಹಣದ ವ್ಯವಹಾರ ನಡೆದಿರುವ ಕುರಿತಂತೆ ಪೊಲೀಸ್ ಉಪನಿರೀಕ್ಷರು ಪರಸ್ಪರ ಸಂಭಾಷಣೆ ನಡೆಸಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಆಡಿಯೋ ಸಂಭಾಷಣೆ ನಡೆಸಿದ್ದಾರೆ ಎನ್ನಲಾಗುವ ಮೂವರು ಪೊಲೀಸ್ ಉಪ ನಿರೀಕ್ಷಕರನ್ನು ಜಿಲ್ಲಾ ಪೊಲೀಸ್ ವರಿಷ್ಠರು ಅಮಾನತ್ತುಗೊಳಿಸಿ ಶಿಸ್ತು ಕ್ರಮ ಕೈಗೊಂಡಿದ್ದಾರೆ.


ಹಳಿಯಾಳ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ಪಿ.ಎಸ್.ಐ ಕಿರಣ ಪಾಟೀಲ, ಅಪರಾಧ ವಿಭಾಗದ ಪಿ.ಎಸ್.ಐ ಕೃಷ್ಣ ಹಾಗೂ ಈ ಹಿಂದೆ ಪಿ.ಎಸ್.ಐ ಆಗಿದ್ದ ವಿನೋದ ರೆಡ್ಡಿ ಅವರನ್ನು ಅಮಾನತ್ತು ಮಾಡಲಾಗಿದ್ದು ಆಡಿಯೋದಲ್ಲಿ ನಡೆದಿರುವ ಮಾತುಕತೆಗಳ ಸತ್ಯಾಸತ್ಯತೆ ಮತ್ತು ಹಣಕಾಸಿನ ವ್ಯವಹಾರ ನಡೆದಿರುವ ಕುರಿತಂತೆ ತನಿಖೆ ನಡೆಯಲಿದೆ.

ಹಳಿಯಾಳ ಪೊಲೀಸ್ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆ ಪಿ.ಎಸ್.ಐ ಹುದ್ದೆ ಪಡೆಯಲು ಹಣದ ವ್ಯವಹಾರ ನಡೆದಿರುವ ಕುರಿತಂತೆ ಮತ್ತು ಮೇಲಧಿಕಾರಿಗೆ ಮಾಸಿಕ ಹಣ
ನೀಡುವ ಕುರಿತಂತೆ ಈ ಮೂವರು ಪೊಲೀಸ್ ಅಧಿಕಾರಿಗಳ ನಡುವೆ ನಡೆದ ಮಾತುಕತೆಯ ಆಡಿಯೋ ಇತ್ತೀಚಿಗೆ ರಾಜಕೀಯ ಪಕ್ಷವೊಂದರ ಪೇಜ್ ಸೇರಿದಂತೆ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕಾರಣ ಜಿಲ್ಲಾ ಪೊಲೀಸ್ ವರಿಷ್ಠರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ತನಿಖೆ ನಡೆಸಿದ್ದರು.

ತನಿಖೆಯ ವರದಿ ಪಡೆದ ಪೊಲೀಸ್ ವರಿಷ್ಠರು ಇದೀಗ ಆಡಿಯೋದಲ್ಲಿ ಮಾತನಾಡಿದ್ದಾರೆ ಎನ್ನಲಾಗುವ ಮೂವರು ಪಿ.ಎಸ್.ಐಗಳನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !
Skip to toolbar