ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳ್ಳಂಬೆಳಗ್ಗೆ ಯಾರೂ ಎದ್ದಿಲ್ಲದ ವೇಳೆ ಮನೆಯ ಕಸವನ್ನು ತಂದು ರೋಡಿಗೆ ಸುರಿಯುವ ಜನಕ್ಕೆ ಸಚಿವ ಕೃಷ್ಣಬೈರೇಗೌಡ ಶಾಕ್ ನೀಡಿದ್ದಾರೆ. ಬೆಳಗ್ಗೆ 5:30 ಸುಮಾರಿಗೆ ನಗರದ ಘನತಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ.
ಬೆಳಗಿನ ಜಾವ ಟ್ರಾವೆಲ್ ಮಾಡಿ ರಸ್ತೆ ಬದಿ ಕಸ ಹಾಕುವವರ ಮೇಲೆಯೂ ನಿಗಾ ಇಟ್ಟಿದ್ದಾರೆ. ಬೆಂಗಳೂರು ಉತ್ತರ ನಿಗಮ ವ್ಯಾಪ್ತಿಯ ಮಲ್ಲಸಂದ್ರ ಹಾಗೂ ಜಾಲಹಳ್ಳಿ ಪ್ರದೇಶದಲ್ಲಿ ಚೆಕಿಂಗ್ ನಡೆದಿದೆ.
ಬಿಎನ್ಸಿಸಿ ಕಮಿಷನರ್ ಪೊಮ್ಮಲ ಸುನಿಲ್ ಕುಮಾರ್ ಅವರೊಂದಿಗೆ ಸಚಿವರು ಸ್ಥಳದಲ್ಲೇ ಇದ್ದು ವ್ಯವಸ್ಥೆಯನ್ನು ಹತ್ತಿರದಿಂದ ವೀಕ್ಷಿಸಿದರು. ಮಲ್ಲಸಂದ್ರದಲ್ಲಿ ಕಸ ಸಂಗ್ರಹಿಸುವ ವಾಹನಗಳ ಚಾಲಕರು ಹಾಗೂ ಸಹಾಯಕರ ಹಾಜರಾತಿ, ವಾಹನಗಳ ಆರ್ಎಫ್ಐಡಿ ಸ್ಕ್ಯಾನಿಂಗ್ ಮತ್ತು ಅವುಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು. ಇದರ ಜತೆಗೆ ಪೌರಕಾರ್ಮಿಕರು ಬೆಳಗ್ಗೆ ಕೆಲಸ ಆರಂಭಿಸುವ ಪಾಯಿಂಟ್ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಸಮಸ್ಯೆಗಳಿದ್ದರೆ ಈಗಲೇ ಹೇಳಿ..
ಪೌರಕಾರ್ಮಿಕರ ಮಸ್ಟರಿಂಗ್ ಪಾಯಿಂಟ್ಗೆ ಭೇಟಿ ನೀಡಿ ಪೌರಕಾರ್ಮಿಕರ ಹಾಜರಾತಿ, ಸಮವಸ್ತ್ರ, ಕೈಗೆ ಗ್ಲೌಸ್ ಹಾಗೂ ಕೆಲಸದ ಪರಿಸ್ಥಿತಿಗಳನ್ನು ಗಮನಿಸಿ, ನಿಮಗೇನಾದ್ರೂ ಸಮಸ್ಯೆಗಳಾಗುತ್ತಿದ್ದರೆ ಹೇಳಿ ಎಂದು ಪ್ರಶ್ನಿಸಿದ್ದಾರೆ. ಅಹವಾಲುಗಳನ್ನು ಸ್ವೀಕರಿಸಿ ಶೀಘ್ರ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು ಖಾಲಿ ಸೈಟ್ಗಳು ಹಾಗೂ ಜಾಗಗಳನ್ನು ಪರಿಶೀಲನೆ ನಡೆಸಿ ಶುಚಿಯಾಗಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.



