September 13, 2026
Sunday, September 13, 2026
spot_img

ಫುಟ್‌ಬಾಲ್‌ ಪ್ರೇಮಿಗಳಿಗೆ ಶಾಕ್: ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿದ ಲಿಯೋನೆಲ್ ಮೆಸ್ಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫುಟ್‌ಬಾಲ್‌ ದಿಗ್ಗಜ ಲಿಯೋನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. 39 ವರ್ಷದ ಮೆಸ್ಸಿ, ಅರ್ಜೆಂಟೀನಾ ತಂಡದ ಪರ 207 ಪಂದ್ಯಗಳಲ್ಲಿ 125 ಗೋಲು ಗಳಿಸಿದ್ದು, ದೇಶದ ಪರ ಅತಿ ಹೆಚ್ಚು ಪಂದ್ಯ ಆಡಿದ ಹಾಗೂ ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರ ಎಂಬ ದಾಖಲೆ ಅವರ ಹೆಸರಿನಲ್ಲಿದೆ.

‘ಈಗ ಟೈಮ್ ಬಂದಿದೆ, ನನ್ನ ಬಳಿ ಇನ್ನು ಕೊಡೋದಕ್ಕೆ ಏನೂ ಉಳಿದಿಲ್ಲ’ ಎಂದು ಹೇಳಿರುವ ಮೆಸ್ಸಿ, ಈ ನಿರ್ಧಾರ ತಮಗೆ ಆಳವಾದ ನೋವು ತಂದಿದೆ ಎಂದು ತಿಳಿಸಿದ್ದಾರೆ.

ವಿಶ್ವಕಪ್ ಗೆಲುವಿನ ನಾಯಕನ ವಿದಾಯ

2022ರ ಕತಾರ್ ವಿಶ್ವಕಪ್‌ನಲ್ಲಿ ಅರ್ಜೆಂಟೀನಾಗೆ ಚಾಂಪಿಯನ್ ಪಟ್ಟ ತಂದುಕೊಟ್ಟ ಮೆಸ್ಸಿ, ತಂಡದ ಪರ ಎರಡು ಕೋಪಾ ಅಮೆರಿಕಾ ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ. ಈ ಬೇಸಿಗೆಯ ವಿಶ್ವಕಪ್‌ನಲ್ಲೂ ಅವರು 8 ಗೋಲು ಹಾಗೂ 4 ಅಸಿಸ್ಟ್‌ಗಳೊಂದಿಗೆ ಗಮನ ಸೆಳೆದಿದ್ದರು. ವಿಶ್ವಕಪ್‌ನಲ್ಲಿ ಒಟ್ಟು 21 ಗೋಲು ಗಳಿಸಿರುವ ಮೆಸ್ಸಿ, ಈ ವಿಭಾಗದಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

20 ವರ್ಷಗಳ ಅಂತಾರಾಷ್ಟ್ರೀಯ ಪಯಣಕ್ಕೆ ತೆರೆ

2005ರಲ್ಲಿ ಅರ್ಜೆಂಟೀನಾ ತಂಡಕ್ಕೆ ಪದಾರ್ಪಣೆ ಮಾಡಿದ ಮೆಸ್ಸಿ, ಆರಂಭಿಕ ಪಂದ್ಯದಲ್ಲೇ ಕೆಂಪು ಕಾರ್ಡ್ ಪಡೆದಿದ್ದರೂ ಬಳಿಕ ವಿಶ್ವ ಫುಟ್‌ಬಾಲ್‌ನ ಶ್ರೇಷ್ಠ ಆಟಗಾರರ ಸಾಲಿಗೆ ಏರಿದರು. 2016ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದ ಅವರು ಬಳಿಕ ನಿರ್ಧಾರ ಬದಲಿಸಿಕೊಂಡಿದ್ದರು. ಇದೀಗ ತಮ್ಮ ವಿದಾಯದ ಸಂದೇಶದಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿರುವ ಮೆಸ್ಸಿ, ಮುಂದಿನ ಪೀಳಿಗೆಯ ಪ್ರತಿಭಾವಂತ ಆಟಗಾರರಿಗೆ ಅವಕಾಶ ನೀಡುವ ಸಮಯ ಬಂದಿದೆ ಎಂದಿದ್ದಾರೆ.

ಕ್ಲಬ್ ಫುಟ್‌ಬಾಲ್‌ನಲ್ಲಿ ಮುಂದುವರಿಯುವೆ

ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿದರೂ ಮೆಸ್ಸಿ ಕ್ಲಬ್ ಮಟ್ಟದಲ್ಲಿ ತಮ್ಮ ಆಟ ಮುಂದುವರಿಸಲಿದ್ದಾರೆ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !