September 1, 2026
Tuesday, September 1, 2026
spot_img

ಮೋದಿ ಕಾಣದಂತೆ SCO ಫೋಟೋ ಕ್ರಾಪ್‌ ಮಾಡಿದ ಪಾಕ್‌: PMO ವಿರುದ್ಧ ಸಿಟ್ಟಿಗೆದ್ದ ನೆಟ್ಟಿಗರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಿರ್ಗಿಸ್ತಾನ್‌ನ ಬಿಷ್ಕೆಕ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಕಚೇರಿ(PMO) ಹಂಚಿಕೊಂಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಹೌದು! ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರನ್ನು ಕಾಣದಂತೆ ಫೋಟೋವನ್ನು ಕ್ರಾಪ್ ಮಾಡಿ ಹಂಚಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಶೃಂಗಸಭೆಯ ಸಂದರ್ಭದಲ್ಲಿ ವಿವಿಧ ರಾಷ್ಟ್ರಗಳ ನಾಯಕರು ಒಟ್ಟಾಗಿ ತೆಗೆಸಿಕೊಂಡಿದ್ದ ಗುಂಪು ಫೋಟೋವನ್ನು ಪಾಕಿಸ್ತಾನದ ಪ್ರಧಾನಿ ಕಚೇರಿ ತನ್ನ ಅಧಿಕೃತ X ಖಾತೆಯಲ್ಲಿ ಹಂಚಿಕೊಂಡಿತ್ತು. ಆದರೆ, ಆ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಇರಾನ್ ಅಧ್ಯಕ್ಷರು ಸೇರಿದಂತೆ ಹಲವು ನಾಯಕರನ್ನು ಉದ್ದೇಶಪೂರ್ವಕವಾಗಿ ಕ್ರಾಪ್ ಮಾಡಲಾಗಿದೆ ಎಂದು ನೆಟ್ಟಿಗರು ದೂರಿದ್ದಾರೆ.

ಮೂಲ ಛಾಯಾಚಿತ್ರದಲ್ಲಿ SCO ಸದಸ್ಯ ರಾಷ್ಟ್ರಗಳ ನಾಯಕರು ಒಟ್ಟಾಗಿ ಪೋಸ್ ನೀಡುತ್ತಿರುವುದು ನೋಡಬಹುದು. ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿರುವ ಮೂಲ ಚಿತ್ರದಲ್ಲೂ ಶೆಹಬಾಜ್ ಷರೀಫ್ ಅವರು ಬಲದಿಂದ ನಾಲ್ಕನೇ ಸ್ಥಾನದಲ್ಲಿ ನಿಂತಿರುವುದು ಗೋಚರಿಸುತ್ತದೆ. ಆದರೆ, ಪಾಕ್ ಪ್ರಧಾನಿ ಕಚೇರಿ ಹಂಚಿಕೊಂಡಿದ್ದ ಚಿತ್ರದಲ್ಲಿ ಇತರ ನಾಯಕರನ್ನು ತೆಗೆದುಹಾಕುವ ರೀತಿಯಲ್ಲಿ ಚಿತ್ರವನ್ನು ಕತ್ತರಿಸಲಾಗಿತ್ತು.

ಉದ್ದೇಶಪೂರ್ವಕವಾಗಿಯೇ ಮಾಡಿದ್ದಾರಾ?

ಈ ಬೆಳವಣಿಗೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾಕಿಸ್ತಾನದ ಪ್ರಧಾನಿ ಕಚೇರಿ ಹಂಚಿಕೊಂಡ ಚಿತ್ರ ಮತ್ತು ಮೂಲ ಛಾಯಾಚಿತ್ರದ ವ್ಯತ್ಯಾಸವನ್ನು ಬಳಕೆದಾರರು ಹಂಚಿಕೊಂಡು ಪ್ರಶ್ನಿಸಿದ್ದಾರೆ. ಕೆಲವರು, ಪ್ರಧಾನಿ ಮೋದಿ ಕಾಣಿಸದಂತೆ ಚಿತ್ರವನ್ನು ಕ್ರಾಪ್ ಮಾಡಿರುವುದು ಉದ್ದೇಶಪೂರ್ವಕ ಕ್ರಮವೇ ಎಂದು ಪ್ರಶ್ನಿಸಿದ್ದಾರೆ.

ಟೀಕೆಗಳು ಹೆಚ್ಚಾದ ಬಳಿಕ ಶೆಹಬಾಜ್ ಷರೀಫ್ ತಮ್ಮ ವೈಯಕ್ತಿಕ X ಖಾತೆಯಲ್ಲಿ ಮೂಲ, ಕತ್ತರಿಸದ ಗುಂಪು ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ. SCO ಶೃಂಗಸಭೆಯಲ್ಲಿ ಭಾಗವಹಿಸಲು ಅವಕಾಶ ದೊರೆತಿರುವುದು ಗೌರವದ ಸಂಗತಿ ಎಂದು ಅವರು ಹೇಳಿದ್ದು, 2027ರ SCO ಅಧ್ಯಕ್ಷತೆಯನ್ನು ಪಾಕಿಸ್ತಾನ ವಹಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಈ ನಡುವೆ, ಮೂಲ ಚಿತ್ರ ಮತ್ತು ಮೊದಲು ಹಂಚಿಕೊಂಡಿದ್ದ ಕ್ರಾಪ್ ಮಾಡಿದ ಚಿತ್ರದ ನಡುವಿನ ವ್ಯತ್ಯಾಸವೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಪ್ರಮುಖ ವಿಷಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !