ಬೆಳಗ್ಗೆ ತಿಂಡಿಗೆ ಮಾಡಿ ಸೂಪರ್ ಟೇಸ್ಟಿ ಹಾಗೂ ಹೆಲ್ದಿ ಮಲ್ಟಿ ಗ್ರೇನ್ ಇಡ್ಲಿ. ರೆಸಿಪಿ ತುಂಬಾನೇ ಸಿಂಪಲ್:
ಅಕ್ಕಿ
ಉದ್ದಿನ ಬೇಳೆ
ರಾಗಿ
ಸಜ್ಜೆ
ನವಣೆ ಅಥವಾ ಜೋಳ
ಮೆಂತ್ಯ ಕಾಳು
ಅವಲಕ್ಕಿ
ಉಪ್ಪು
ಮೊದಲು ಉದ್ದಿನ ಬೇಳೆ ಮತ್ತು ಮೆಂತ್ಯ ಕಾಳನ್ನು ಒಂದು ಪಾತ್ರೆಯಲ್ಲಿ ಹಾಕಿ. ಇನ್ನೊಂದು ಪಾತ್ರೆಯಲ್ಲಿ ಅಕ್ಕಿ, ರಾಗಿ, ಸಜ್ಜೆ, ನವಣೆ ಎಲ್ಲವನ್ನೂ ಒಟ್ಟಿಗೆ ಸೇರಿಸಿ ಚೆನ್ನಾಗಿ ನೀರಲ್ಲಿ 2-3 ಸಾರಿ ತೊಳೆಯಿರಿ. ಆಮೇಲೆ ನೀರು ಹಾಕಿ ಕನಿಷ್ಠ 5 ರಿಂದ 6 ಗಂಟೆಗಳ ಕಾಲ ನೆನೆಯಲು ಬಿಡಿ.
ರುಬ್ಬೋಕ್ಕಿಂತ 15 ನಿಮಿಷ ಮುಂಚೆ ಅವಲಕ್ಕಿಯನ್ನು ನೀರಲ್ಲಿ ನೆನೆಸಿಡಿ. ಮೊದಲು ಉದ್ದಿನ ಬೇಳೆಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ನೆನೆಸಿದ ಧಾನ್ಯಗಳು ಮತ್ತು ಅವಲಕ್ಕಿ ಹಾಕಿ ಸ್ವಲ್ಪ ತರಿತರಿಯಾಗಿ ರುಬ್ಬಿ. ರುಬ್ಬಿದ ಹಿಟ್ಟನ್ನು ಚೆನ್ನಾಗಿ ಕೈಯಲ್ಲಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ ರಾತ್ರಿಯಿಡೀ ಬೆಚ್ಚಗಿನ ಜಾಗದಲ್ಲಿ ಇಡಿ. ಬೆಳಿಗ್ಗೆ ನೋಡಿದ್ರೆ ಹಿಟ್ಟು ಚೆನ್ನಾಗಿ ಉಬ್ಬಿ ಬಂದಿರುತ್ತೆ.
ಈಗ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ. ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಸವರಿ, ಹಿಟ್ಟು ಹಾಕಿ, ಸ್ಟೀಮ್ ಅಲ್ಲಿ 10 ರಿಂದ 12 ನಿಮಿಷ ಬೇಯಿಸಿದ್ರೆ ಘಮಘಮಿಸೋ ಬಿಸಿ ಬಿಸಿ ಮಲ್ಟಿ ಗ್ರೇನ್ ಇಡ್ಲಿ ರೆಡಿ. ಇದಕ್ಕೆ ಕಾಯಿ ಚಟ್ನಿ, ಕೆಂಪು ಖಾರ ಚಟ್ನಿ ಜೊತೆ ತಿಂದ್ರೆ ರುಚಿ ಸಖತ್ ಆಗಿರುತ್ತೆ!



