September 2, 2026
Wednesday, September 2, 2026
spot_img

‘ಚಾಂಡ್ಲರ್’ ಮ್ಯಾಥ್ಯೂ ಪೆರ್ರಿ ಬದುಕಿನ ಕಥೆ ಈಗ ನೆಟ್‌ಫ್ಲಿಕ್ಸ್‌ನಲ್ಲಿ: ಬರ್ತಿದೆ ವಿಶೇಷ ಡಾಕ್ಯುಸಿರೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ‘ಫ್ರೆಂಡ್ಸ್’ ಸೀರೀಸ್ ಮೂಲಕ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ‘ಚಾಂಡ್ಲರ್ ಬಿಂಗ್’ ಆಗಿ ಮನೆಮಾಡಿದ್ದ ನಟ ಮ್ಯಾಥ್ಯೂ ಪೆರ್ರಿ ಅವರ ನಿಜವಾದ ಜೀವನದ ಕಥೆ ಈಗ ಒಟಿಟಿಗೆ ಬರ್ತಿದೆ. ಅವರ ಜೀವನ ಮತ್ತು ಬದುಕಿನ ಏಳುಬೀಳುಗಳನ್ನೊಳಗೊಂಡ ‘ದಿ ಒನ್ ಎಬೌಟ್ ಮ್ಯಾಥ್ಯೂ ಪೆರ್ರಿ’ ಎಂಬ ಡಾಕ್ಯುಸಿರೀಸ್ ನೆಟ್‌ಫ್ಲಿಕ್ಸ್‌ನಲ್ಲಿ ಅಕ್ಟೋಬರ್ 27ರಿಂದ ಸ್ಟ್ರೀಮ್ ಆಗಲಿದೆ.

ಈ ಸೀರೀಸ್‌ನಲ್ಲಿ ಮ್ಯಾಥ್ಯೂ ಅವರ ತಂಗಿ ಮಿಯಾ ಪೆರ್ರಿ ಬೋವಿಕ್ ತಮ್ಮ ಅಣ್ಣನ ಬಗ್ಗೆ ಅಪರೂಪದ ಮತ್ತು ಇದುವರೆಗೂ ಯಾರೂ ನೋಡದ ಖಾಸಗಿ ವೀಡಿಯೋಗಳು ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ಕ್ವೈಟ್ ಆನ್ ಸೆಟ್’ ಮತ್ತು ‘ಫ್ರೇಮಿಂಗ್ ಬ್ರಿಟ್ನಿ ಸ್ಪಿಯರ್ಸ್’ ನಂತಹ ಸೂಪರ್ ಹಿಟ್ ಸೀರೀಸ್ ನಿರ್ದೇಶಿಸಿದ್ದ ಮೇರಿ ರಾಬರ್ಟ್‌ಸನ್ ಈ ಡಾಕ್ಯುಸೀರೀಸ್‌ ಅನ್ನು ನಿರ್ದೇಶಿಸಿದ್ದಾರೆ.

ಮ್ಯಾಥ್ಯೂ ಕೇವಲ ನಟನಾಗಿ ಅಷ್ಟೇ ಅಲ್ಲದೆ, ತಮ್ಮ ಖಾಸಗಿ ಜೀವನದಲ್ಲಿ ಎದುರಿಸಿದ ಕಷ್ಟಗಳು, ವ್ಯಸನದ ವಿರುದ್ಧ ಹೋರಾಡಿದ ರೀತಿ ಮತ್ತು ಅವರ ಕಷ್ಟದ ದಿನಗಳಲ್ಲೂ ಇತರರನ್ನು ನಗಿಸುತ್ತಿದ್ದ ಗುಣದ ಬಗ್ಗೆ ತಂಗಿ ಮಿಯಾ ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ. “ನಮ್ಮ ಅಣ್ಣ ಎಲ್ಲರನ್ನೂ ನಗಿಸ್ತಾ ಇದ್ದ, ಪ್ರೀತಿಸ್ತಾ ಇದ್ದ. ಆತನ ಕತ್ತಲೆಯ ದಿನಗಳಲ್ಲೂ ಆ ನಗು ಮಾಸಿರಲಿಲ್ಲ” ಎಂದು ಮಿಯಾ ನೆನಪಿಸಿಕೊಂಡಿದ್ದಾರೆ.

2023ರ ಅಕ್ಟೋಬರ್ 28ರಂದು 54ನೇ ವಯಸ್ಸಿನಲ್ಲಿ ಮ್ಯಾಥ್ಯೂ ಪೆರ್ರಿ ನಮ್ಮನ್ನಗಲಿದ್ದರು. ಈಗ ಅವರ ಬದುಕಿನ ನೈಜ ಹಾದಿಯನ್ನು ಅಭಿಮಾನಿಗಳ ಮುಂದೆ ತರಲು ಈ ಸರಣಿ ಸಜ್ಜಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !