September 2, 2026
Wednesday, September 2, 2026
spot_img

ಕಾಮಿಡಿ ಬಿಟ್ಟು ಸೀರಿಯಸ್ ಹಾದಿ ಹಿಡಿದ ಪ್ರಿಯದರ್ಶನ್: ‘ಹೈವಾನ್’ ಅವತಾರದಲ್ಲಿ ಬರ್ತಿದ್ದಾರೆ ಅಕ್ಷಯ್-ಸೈಫ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮಗೆಲ್ಲ ಪ್ರಿಯದರ್ಶನ್ ಎಂದರೆ ತಟ್ಟನೆ ನೆನಪಾಗೋದು ಹೊಟ್ಟೆ ಹುಣ್ಣಾಗಿಸುವಂತಹ ಕಾಮಿಡಿ ಸಿನಿಮಾಗಳು. ‘ಹೇರಾ ಫೇರಿ’, ‘ಹಂಗಾಮಾ’, ‘ಭೂಲ್ ಭುಲಯ್ಯ’ ಅಂತ ಸೂಪರ್ ಹಿಟ್ ಕಾಮಿಡಿ ಮೂವಿಗಳನ್ನು ಕೊಟ್ಟು ನಮ್ಮನ್ನು ನಗಿಸಿರೋ ಈ ಡೈರೆಕ್ಟರ್‌ಗೆ ಮಾತ್ರ ಕಾಮಿಡಿಗಿಂತ ಸೀರಿಯಸ್ ಮೂವಿ ಮಾಡೋದೆ ಅಂದ್ರೆ ಪ್ರಾಣವಂತೆ. ‘ಗರ್ದಿಶ್’, ‘ವಿರಾಸತ್’ ತರಹದ ಸಿನಿಮಾಗಳನ್ನು ಕೊಟ್ಟಿದ್ದ ಪ್ರಿಯದರ್ಶನ್, ಈಗ ಬಹಳ ವರ್ಷಗಳ ನಂತರ ಮತ್ತೆ ಹಿಂದಿಯಲ್ಲಿ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಹಿಡಿದು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ.

ಅಂದಹಾಗೆ, ಈ ಹೊಸ ಸಿನಿಮಾದ ಹೆಸರು ‘ಹೈವಾನ್’. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಮತ್ತು ಪ್ರಿಯದರ್ಶನ್ ಮೊದಲ ಬಾರಿಗೆ ಜೊತೆಯಾಗುತ್ತಿದ್ದರೆ, ಅವರ ನೆಚ್ಚಿನ ಹೀರೋ ಅಕ್ಷಯ್ ಕುಮಾರ್ ಈ ಬಾರಿ ಎಲ್ಲರೂ ಹುಬ್ಬೇರಿಸುವಂತಹ ಒಬ್ಬ ಸೈಕೋ ಕೊಲೆಗಾರನ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಏನಿದು ‘ಹೈವಾನ್’ ಕಥೆ?

ಈ ಸಿನಿಮಾ 2016ರಲ್ಲಿ ಮಲಯಾಳಂನಲ್ಲಿ ಮೋಹನ್‌ಲಾಲ್ ನಟಿಸಿ ಬ್ಲಾಕ್‌ಬಸ್ಟರ್ ಆಗಿದ್ದ ‘ಒಪ್ಪಂ’ ಚಿತ್ರದ ಹಿಂದಿ ರಿಮೇಕ್. ಇದರಲ್ಲಿ ಸೈಫ್ ಅಲಿ ಖಾನ್ ಒಬ್ಬ ಕಣ್ಣು ಕಾಣಿಸದ ಲಿಫ್ಟ್ ಆಪರೇಟರ್ ಪಾತ್ರ ಮಾಡುತ್ತಿದ್ದಾರೆ. “ಈ ಕಥೆಗೆ ಸೈಫ್ ಅವರ ವಯಸ್ಸು ಮತ್ತು ಲುಕ್ ಸಖತ್ ಸೂಟ್ ಆಯ್ತು. ಕಥೆ ಕೇಳಿದ ತಕ್ಷಣ ಸೈಫ್ ಕೂಡ ‘ನಾನು ಈ ಥರದ ರೋಲ್ ಇದುವರೆಗೂ ಮಾಡಿಲ್ಲ, ಖಂಡಿತ ಮಾಡ್ತೀನಿ’ ಅಂದರು” ಎಂದು ಪ್ರಿಯದರ್ಶನ್ ನೆನಪಿಸಿಕೊಂಡಿದ್ದಾರೆ.

ವಿಲನ್ ರೋಲ್‌ಗೆ ಅಕ್ಷಯ್ ಸೆಲೆಕ್ಟ್ ಆಗಿದ್ದು ಹೇಗೆ?

ಅಸಲಿ ಟ್ವಿಸ್ಟ್ ಇರೋದೇ ಇಲ್ಲಿ. ಈ ಸಿನಿಮಾಗೆ ವಿಲನ್ ಆಗಿ ಅಕ್ಷಯ್ ಕುಮಾರ್ ಮೊದಲ ಚಾಯ್ಸ್ ಆಗಿರಲೇ ಇಲ್ಲವಂತೆ. ಪ್ರಿಯದರ್ಶನ್ ಈ ಕ್ರೇಜಿ ರೋಲ್ ಮಾಡಲು ಬಾಲಿವುಡ್‌ನ ಪ್ರಮುಖ ನಟರನ್ನು ಭೇಟಿಯಾಗಿದ್ದರು. ಆದರೆ, ‘ಸೈಕೋ ವಿಲನ್ ರೋಲ್ ನಮಗೆ ಬೇಡ’ ಎಂದು ಎಲ್ಲರೂ ರಿಜೆಕ್ಟ್ ಮಾಡಿದ್ದರು. ಕೊನೆಗೆ, ಪ್ರಿಯದರ್ಶನ್ ಮತ್ತು ಅಕ್ಷಯ್ ‘ಭೂತ್ ಬಂಗ್ಲಾ’ ಸಿನಿಮಾದ ಶೂಟಿಂಗ್‌ನಲ್ಲಿದ್ದಾಗ, ಪ್ರಿಯದರ್ಶನ್ ಹೀಗೆಯೆ ನಾರ್ಮಲ್ ಆಗಿ ಈ ವಿಚಾರವನ್ನು ಅಕ್ಷಯ್ ಬಳಿ ಪ್ರಸ್ತಾಪಿಸಿದ್ದಾರೆ. ತಕ್ಷಣ ಅಕ್ಷಯ್, “ಈ ರೋಲ್ ಅನ್ನು ನಾನು ಯಾಕೆ ಮಾಡಬಾರದು?” ಎಂದು ಕೇಳಿ, ಆ ರೋಲ್ ಓಕೆ ಮಾಡಿಯೇ ಬಿಟ್ಟರು. ಅಷ್ಟೊಂದು ದೊಡ್ಡ ನಟರೆಲ್ಲ ರಿಜೆಕ್ಟ್ ಮಾಡಿದ್ದಾಗ, ಅಕ್ಷಯ್ ಈ ರೋಲ್ ಒಪ್ಕೋತಾರೆ ಎಂದು ನಾನು ಅಂದುಕೊಂಡೇ ಇರಲಿಲ್ಲ” ಎಂದು ಡೈರೆಕ್ಟರ್ ಹೇಳಿದ್ದಾರೆ.

ಸಿನಿಮಾ ಮಾಡುವಾಗ ಪ್ರಿಯದರ್ಶನ್ ಅವರ ರೂಲ್ ಒಂದೇ, ನಟರು ತಮ್ಮ ಇಮೇಜ್ ಬಿಟ್ಟು ಕಥೆಗೆ ಮತ್ತು ಡೈರೆಕ್ಟರ್‌ಗೆ ಕಂಪ್ಲೀಟ್ ಆಗಿ ಸರಂಡರ್ ಆಗಬೇಕು. ನಟ ತಾನೇ ರೈಟರ್, ತಾನೇ ಡೈರೆಕ್ಟರ್ ಆಗಲು ಹೋದರೆ ಸಿನಿಮಾ ಕಥೆ ಗೊಂದಲವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ. ಒಟ್ಟಿನಲ್ಲಿ, ಸೈಫ್ ಅಲಿ ಖಾನ್ ಅವರ ಚಾಲೆಂಜಿಂಗ್ ಆಕ್ಟಿಂಗ್ ಮತ್ತು ಅಕ್ಷಯ್ ಕುಮಾರ್ ಅವರ ವಿಲನ್ ಅವತಾರ ನೋಡಲು ‘ಹೈವಾನ್’ ಸಿನಿಮಾಗೆ ಪ್ರೇಕ್ಷಕರು ಕಾಯುವುದು ಗ್ಯಾರಂಟಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !