ಹೊಸದಿಗಂತ ವರದಿ ಬೆಳಗಾವಿ :
ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೊಬೈಲ್ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ವಿವಿಧ ಕಂಪನಿಗಳ 40 ಮೊಬೈಲ್ ಫೋನ್ಗಳು ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸ್ವತ್ತಿನ ಒಟ್ಟು ಮೌಲ್ಯ ₹10,34,200 ಎಂದು ಪೊಲೀಸರು ಮಾಹಿತಿ ನೀಡಿದರು. ಮೇ 23ರಂದು ಸಾಲಹಳ್ಳಿ ಗ್ರಾಮದ ಕಾಯಿಪಲ್ಲೆ ಸಂತೆಯಲ್ಲಿ ಶಿಕ್ಷಕ ನೀಲಪ್ಪ ಸಣ್ಣತಮ್ಮಪ್ಪ ಸಕ್ರಿ (48) ಅವರಿಗೆ ಸೇರಿದ ಸುಮಾರು ₹21 ಸಾವಿರ ಮೌಲ್ಯದ ಮೊಬೈಲ್ ಫೋನ್ ಕಳವಾಗಿತ್ತು. ಈ ಕುರಿತು ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಪರಾಧ ಸಂಖ್ಯೆ 99/2026ರಂತೆ ಬಿ.ಎನ್.ಎಸ್. 2023ರ ಕಲಂ 303(2) ಹಾಗೂ 112ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ತನಿಖೆಗಾಗಿ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ. ಬಸರ್ಗಿ, ರಾಮದುರ್ಗ ಡಿವೈಎಸ್ಪಿ ಚಂದ್ರಂಬರ ಮಡಿವಾಳ ಹಾಗೂ ಸಿಪಿಐ ವಿನಾಯಕ ಬಡಿಗೇರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ವಿಶೇಷ ತಂಡ ಕಾರ್ಯಾಚರಣೆ ನಡೆಸಿ ವಿಕಾಸ ವೆಂಕಟೇಶ ಭೋವಿ (22), ಕುಮಾರ ಪಾಪಣ್ಣ ಭೋವಿ (46), ಪ್ರವೀಣ ಮಂಜಪ್ಪ ಭೋವಿ (34), ಸಂತೋಷ ಗವಿಸ್ವಾಮಿ ಕುಂಡ (30), ಶಿವು ಯಲ್ಲಪ್ಪ ಭೋವಿ (35), ವೆಂಕಟೇಶ ಈರಪ್ಪ ಭೋವಿ (45), ಅಕ್ಷಯ ಗಣೇಶ ಜೆ. ಅಲಿಯಾಸ್ ಅನಂತಪುರ ಗಣೇಶ (30) ಹಾಗೂ ಸಚಿನ್ ಲಕ್ಷ್ಮಣ ಕಲ್ಲವಡ್ಡರ (30) ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತರಿಂದ ₹4,94,200 ಮೌಲ್ಯದ ವಿವಿಧ ಕಂಪನಿಗಳ 40 ಮೊಬೈಲ್ ಫೋನ್ಗಳು ಹಾಗೂ ₹5,40,000 ಮೌಲ್ಯದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ₹10,34,200 ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಇನ್ನೂ ಹೆಚ್ಚಿನ ಮೊಬೈಲ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ ಎಂದು ಕಟ್ಟಕೊಳ್ಳ ಪೊಲೀಸರು ತಿಳಿಸಿದ್ದಾರೆ.



