September 23, 2026
Wednesday, September 23, 2026
spot_img

ಥೆರಪಿಗೆ ಹೋಗೋದು ಬಿಟ್ಟು ಈ ಸಿನಿಮಾ ನೋಡಿ! ‘ಹನುಮಾನ್ ಅಂಶ’ ನೋಡಿ ಫಿದಾ ಆದ ಕಂಗನಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾವುದೇ ದೊಡ್ಡ ಪ್ರಚಾರವಿಲ್ಲದೆ, ಸೂಪರ್‌ಸ್ಟಾರ್‌ಗಳ ಹಂಗಿಲ್ಲದೆ ಸೈಲೆಂಟ್ ಆಗಿ ಥಿಯೇಟರ್‌ಗೆ ಬಂದು ಈಗ ಬಾಕ್ಸ್ ಆಫೀಸ್‌ನಲ್ಲಿ ಸೌಂಡ್ ಮಾಡುತ್ತಿರೋ ಸಿನಿಮಾ ಅಂದರೆ ಅದು ‘ಹನುಮಾನ್ ಅಂಶ’. ಕೇವಲ ₹2 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ, ರಿಲೀಸ್ ಆದ ಆರಂಭದಲ್ಲಿ ಕೊಂಚ ಮೆಲ್ಲಗೆ ಹೆಜ್ಜೆ ಇಟ್ಟರೂ, ಜನರ ಬಾಯಿಂದ ಬಾಯಿಗೆ ಹಬ್ಬಿದ ಒಳ್ಳೆಯ ಮಾತಿನಿಂದ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದೆ.

ನೀಮ್ ಕರೋಲಿ ಬಾಬಾ ಅವರ ಪವಾಡಗಳು ಮತ್ತು ಅವರ ಅನುಭವಗಳನ್ನು ಆಧರಿಸಿ ಮಾಡಲಾದ ಈ ಸಿನಿಮಾ ಜನರಿಗೆ ಬರೀ ಚಿತ್ರವಾಗಿ ಉಳಿದಿಲ್ಲ, ಅದೊಂದು ಆಧ್ಯಾತ್ಮಿಕ ಅನುಭವವಾಗಿದೆ. ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಈ ಸಿನಿಮಾವನ್ನು ನೋಡಿ ಫುಲ್ ಫಿದಾ ಆಗಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ನೀಮ್ ಕರೋಲಿ ಬಾಬಾ ಅವರ ಫೋಟೋ ಹಂಚಿಕೊಂಡ ಕಂಗನಾ, “ಹನುಮಾನ್ ಅಂಶ ಬರೀ ಸಿನಿಮಾವಲ್ಲ, ಇದೊಂದು ಸುಂದರ ಸತ್ಸಂಗ! ನೀವು ಮಾನಸಿಕ ನೆಮ್ಮದಿಗೆ ಥೆರಪಿಗೆ ಹೋಗುವ ಬದಲು ಥಿಯೇಟರ್‌ಗೆ ಹೋಗಿ ಈ ಸಿನಿಮಾ ನೋಡಿ” ಎಂದು ಮನಸಾರೆ ಹೊಗಳಿದ್ದಾರೆ.

ಅಷ್ಟೇ ಅಲ್ಲದೆ, ಪ್ರಸಿದ್ಧ ನಿರ್ದೇಶಕ ಮಧುರ್ ಭಂಡಾರ್ಕರ್ ಕೂಡ ಈ ಚಿತ್ರವನ್ನು ಕೊಂಡಾಡಿದ್ದು, “ಸಣ್ಣ ಬಜೆಟ್, ಯಾವುದೇ ದೊಡ್ಡ ನಟರಿಲ್ಲದ ಈ ಸಿನಿಮಾ ಇಡೀ ಭಾರತೀಯ ಚಿತ್ರರಂಗಕ್ಕೆ ಒಂದು ದೊಡ್ಡ ಪಾಠ. ದೊಡ್ಡ ಬಜೆಟ್ ಸಿನಿಮಾಗಳಿಗಿಂತ ಒಳ್ಳೆಯ ಕಥೆ ಮತ್ತು ನಿಷ್ಠೆಯೇ ಬಾಕ್ಸ್ ಆಫೀಸ್ ಗೆಲ್ಲುತ್ತದೆ ಎಂಬುದಕ್ಕೆ ಇದೇ ಸಾಕ್ಷಿ” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿ ನೀಮ್ ಕರೋಲಿ ಬಾಬಾ ಪಾತ್ರದಲ್ಲಿ ಅಭಿನಯಿಸಿರುವ ಶೋಭಿನವ್ ಸತ್ಯ ಅವರ ನಟನೆ ಹಾಗೂ ವಿಶಾಲ್ ಅವರ ನಿರ್ದೇಶನ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !