ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಜಿಎಫ್ ನಂತರ ಇಡೀ ದೇಶವೇ ಕಾದು ಕುಳಿತಿದ್ದ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ಯ ಅಷ್ಟಕ್ಕಷ್ಟೇ ಎನ್ನುವ ಸ್ಥಿತಿಯಲ್ಲಿದೆ. ಮಂಗಳವಾರ ಈ ಸಿನಿಮಾ ಕೇವಲ 8 ಕೋಟಿ ರೂಪಾಯಿ ಗಳಿಕೆ ಕಂಡಿದೆ. ದಕ್ಷಿಣ ಭಾರತದಲ್ಲಿ ಕಲೆಕ್ಷನ್ ಕೊಂಚ ಡೌನ್ ಆಗಿದ್ದರೂ, ಹಿಂದಿಯಲ್ಲಿ ಡಿಸ್ಕೌಂಟ್ ಟಿಕೆಟ್ ಆಫರ್ ಇದ್ದಿದ್ದರಿಂದ ಹಿಂದಿ ವರ್ಷನ್ ಸ್ವಲ್ಪ ಮಟ್ಟಿಗೆ ಕಲೆಕ್ಷನ್ ಬ್ಯಾಲೆನ್ಸ್ ಆಗಿದೆ. ಇದನ್ನೆಲ್ಲಾ ಸೇರಿಸಿದರೆ 7 ದಿನಗಳಲ್ಲಿ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಟಾಕ್ಸಿಕ್ ಒಟ್ಟು 246 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಈಗಿನ ಟ್ರೆಂಡ್ ನೋಡಿದರೆ, ಮೊದಲ ವಾರ ಮುಗಿಯುವಷ್ಟರಲ್ಲಿ ಈ ಆಕ್ಷನ್-ಗ್ಯಾಂಗ್‌ಸ್ಟಾರ್ ಡ್ರಾಮಾ ಸುಮಾರು 255 ಕೋಟಿ ತಲುಪಬಹುದು. ಆದರೆ ಅದಾದ ನಂತರ ಕಲೆಕ್ಷನ್‌ನಲ್ಲಿ ಭಾರಿ ಕುಸಿತ ಕಾಣುವ ಸಾಧ್ಯತೆಯಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾ ತನ್ನ ಪೂರ್ತಿ ಥಿಯೇಟರ್ ರನ್ ಮುಗಿಯುವಷ್ಟರಲ್ಲಿ ಭಾರತದಲ್ಲಿ 275 ಕೋಟಿ ಹಾಗೂ ಪ್ರಪಂಚದಾದ್ಯಂತ 300 ಕೋಟಿ ತಲುಪಿದರೆ ಅದುವೇ ದೊಡ್ಡ ವಿಷಯ. ಹಿಂದಿಯಲ್ಲಿ ಈ ಚಿತ್ರಕ್ಕೆ ಒಳ್ಳೆ ಬಿಸಿನೆಸ್ ಸಿಕ್ಕಿದ್ದು, ಬರೋಬ್ಬರಿ 141 ಕೋಟಿ ಕಲೆಕ್ಷನ್ ಆಗಿದೆ. ಕರ್ನಾಟಕದಲ್ಲಿ 63.50 ಕೋಟಿ, ತೆಲುಗು ರಾಜ್ಯಗಳಲ್ಲಿ 27.50 ಕೋಟಿ, ತಮಿಳುನಾಡಿನಲ್ಲಿ 11.25 ಕೋಟಿ ಹಾಗೂ ಕೇರಳದಲ್ಲಿ ಕೇವಲ 3.50 ಕೋಟಿ ಗಳಿಸಿದೆ.
ಮೊದಲ ದಿನವೇ 100 ಕೋಟಿಗೂ ಅಧಿಕ ಭರ್ಜರಿ ಓಪನಿಂಗ್ ಪಡೆದು ಧೂಳೆಬ್ಬಿಸಿದ್ದ ಟಾಕ್ಸಿಕ್, ಆಮೇಲೆ ಪ್ರೇಕ್ಷಕರಿಂದ ನೆಗೆಟಿವ್ ರೆಸ್ಪಾನ್ಸ್ ಬಂದಿದ್ದಕ್ಕೆ ಎರಡನೇ ದಿನವೇ ತೀವ್ರ ಕುಸಿತ ಕಂಡಿತು. ಒಟ್ಟಿನಲ್ಲಿ ಹೇಳಬೇಕೆಂದರೆ ಬಾಕ್ಸ್ ಆಫೀಸ್‌ನಲ್ಲಿ ಟಾಕ್ಸಿಕ್ ಪ್ಲಾಪ್ ಆಗಿ ಹೊರಹೊಮ್ಮಿದೆ. ಚಿತ್ರದ ಬಜೆಟ್ ತೀರಾ ಹೆಚ್ಚಾಗಿದ್ದು, ನಾನ್-ಥಿಯೇಟ್ರಿಕಲ್ ಬಿಸಿನೆಸ್‌ನಲ್ಲೂ ಸರಿಯಾಗಿ ಹಣ ರಿಕವರಿ ಆಗಿಲ್ಲ. ಇದರಿಂದಾಗಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ನಷ್ಟ ಅನುಭವಿಸಿದ ಸಿನಿಮಾಗಳ ಸಾಲಿಗೆ ‘ಟಾಕ್ಸಿಕ್’ ಸೇರುವ ಹಂತದಲ್ಲಿದೆ.



