ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿದರೂ, ರಿಯಲ್ ಲೈಫ್‌ನಲ್ಲಿ ಕೊಡುಗೈ ದಾನಿಯಾಗಿ ಜನರ ಮನಸ್ಸು ಗೆದ್ದಿರೋ ಏಕೈಕ ನಟ ಅಂದ್ರೆ ಅದು ಸೋನು ಸೂದ್. ಕೊರೊನಾ ಕಷ್ಟದ ಸಮಯದಲ್ಲಿ ಸಾವಿರಾರು ಜನರಿಗೆ ದಾರಿದೀಪವಾಗಿದ್ದ ಸೋನು ಸೂದ್, ಈಗ ನೇಪಾಳದಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ನರಳುತ್ತಿರುವ ಸಂತ್ರಸ್ತರ ಕಣ್ಣೀರು ಒರೆಸಲು ಸ್ವತಃ ಅಖಾಡಕ್ಕೆ ಇಳಿದಿದ್ದಾರೆ.
ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿರೋ ಜನರಿಗೆ ನೆರವಾಗಲು ಸೋನು ಸೂದ್ ಮಂಗಳವಾರ ಕಾಠ್ಮಂಡುವಿಗೆ ತಲುಪಿದ್ದು, ಅಲ್ಲಿಂದ ಅತ್ಯಂತ ಹೆಚ್ಚು ಹಾನಿಗೊಳಗಾಗಿರುವ ನುವಾಕೋಟ್ ಪ್ರದೇಶಕ್ಕೆ ತೆರಳಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸೋನು ಸೂದ್, “ಇಲ್ಲಿನ ಪರಿಸ್ಥಿತಿ ನಿಜಕ್ಕೂ ಕರುಣಾಜನಕವಾಗಿದೆ. ಶೇಖರಣೆಯಾಗಿರುವ ಕೆಸರು ಮತ್ತು ತ್ಯಾಜ್ಯದ ಅಡಿಯಲ್ಲಿ ಇಡೀ ಮನೆಗಳೇ ಹೂತುಹೋಗಿವೆ. ಅನೇಕರು ತಮ್ಮ ಜೀವನಾಧಾರವನ್ನೇ ಕಳೆದುಕೊಂಡಿದ್ದಾರೆ. ಸಂತ್ರಸ್ತರನ್ನು ಮತ್ತು ಮೃತಪಟ್ಟವರ ಕುಟುಂಬಗಳನ್ನು ಭೇಟಿಯಾದಾಗ ಎದೆ ಜಲ್ ಎಂದಿತು. ನಾವು ನಮ್ಮ ಚಾರಿಟಿ ಮೂಲಕ ಊಟದ ವ್ಯವಸ್ಥೆ, ತುರ್ತು ವೈದ್ಯಕೀಯ ನೆರವು ಮತ್ತು ತಾತ್ಕಾಲಿಕ ವಸತಿ ಕಲ್ಪಿಸಲು ಶ್ರಮಿಸುತ್ತಿದ್ದೇವೆ. ಪ್ರವಾಹದಲ್ಲೂ ಪವಾಡಸದೃಶವಾಗಿ ಉಳಿದುಕೊಂಡ ‘ಗ್ರೀನ್ ಹೌಸ್’ ಎಂಬ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದ್ದೇವೆ” ಎಂದು ಭಾವುಕರಾಗಿ ನುಡಿದಿದ್ದಾರೆ.
ಇನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರವಾಹದಿಂದ ಬದುಕಿ ಉಳಿದ ಮುದ್ದು ಮಕ್ಕಳ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿರುವ ಅವರು, “ಈ ಮಕ್ಕಳು ತಮ್ಮ ಮನೆಗಳನ್ನು, ಕುಟುಂಬವನ್ನು ಮತ್ತು ಬಾಲ್ಯವನ್ನು ಕಳೆದುಕೊಂಡಿದ್ದಾರೆ… ಆದರೆ ನಾವೆಲ್ಲರೂ ಸೇರಿ ಅವರಿಗೆ ಒಂದು ಹೊಸ ಭವಿಷ್ಯ ರೂಪಿಸಿಕೊಡೋಣ. ನೇಪಾಳವೇ, ನೀವೇನೂ ಒಂಟಿಯಲ್ಲ, ನಾವಿದ್ದೇವೆ” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
https://www.instagram.com/p/DcwOFJNAPPj/?utm_source=ig_web_button_share_sheet
ಯಾರಾದರೂ ಸಂತ್ರಸ್ತರು ನೆರವಿನ ನಿರೀಕ್ಷೆಯಲ್ಲಿದ್ದರೆ ಅಥವಾ ಅವರ ಮಾಹಿತಿ ಸಿಕ್ಕರೆ ತಕ್ಷಣ ತಮ್ಮ ಚಾರಿಟಿ ತಂಡವನ್ನು ಸಂಪರ್ಕಿಸಲು ಸೋನು ಮನವಿ ಮಾಡಿದ್ದಾರೆ. ಕಷ್ಟ ಅಂದ ತಕ್ಷಣ ಧಾವಿಸಿ ಬರೋ ಈ ರಿಯಲ್ ಹೀರೋ ಸಾಹಸಕ್ಕೆ ಈಗ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.



