September 22, 2026
Tuesday, September 22, 2026
spot_img

ಸಮಾನತೆ, ಸ್ವಾವಲಂಬಿ ಬದುಕಿನ ಬಗ್ಗೆ ಮಾತನಾಡೋ ಹೆಂಗಸರೇ ಮಗಳಿಗೆ ಗಂಡು ಹುಟ್ಟಲಿ ಅಂದುಕೊಳ್ಳೋದ್ಯಾಕೆ? ಸಿಎಂ ಪ್ರಶ್ನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈಗಿನ ಹೆಣ್ಣುಮಕ್ಕಳು ಸಮಾನತೆ, ಸ್ವಾವಲಂಬಿ ಬದುಕಿನ ಬಗ್ಗೆ ಉದ್ದುದ್ದ ಮಾತನಾಡುತ್ತಾರೆ. ಆದರೆ ಮಗಳೋ, ಸೊಸೆಯೋ ಗರ್ಭಿಣಿ ಎಂದು ಗೊತ್ತಾದಾಗ ಗಂಡುಮಗುವಾಗಲಿ ಎಂದು ಅಪೇಕ್ಷೆ ಪಡುತ್ತೀರಿ. ಹೀಗೆ ಮಾಡಿದ್ರೆ ಹೇಗೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ʼಒಟ್ಟಿಗೆ ಬೆಳೆಯೋಣ’ ಎಂಬ ಮಹಿಳಾ ಉದ್ಯಮಿಗಳ ಸಮ್ಮೇಳನದಲ್ಲಿ ಮಹಿಳೆಯರು ಆಯೋಜಿಸಿದ್ದ ಟುಗೆದರ್ ವಿ ಗ್ರೋ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲ ಹೆಣ್ಣುಮಕ್ಕಳ ಬಗ್ಗೆ ಮಾತನಾಡುತ್ತಿಲ್ಲ ಆದರೆ ಹಲವರ ಒಪಿನಿಯನ್‌ ಹೀಗೇ ಇರುತ್ತದೆ. ನಮ್ಮ ಮನೆಯನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳಿ. ನನ್ನ ಮಗಳು ಐಶ್ವರ್ಯಾಗೆ ಹೆಣ್ಣು ಮಗು ಜನನವಾದಾಗ ನನ್ನ ಮಡದಿಗೆ ಮೊದಲು ಸಮಾಧಾನವೇ ಆಗಿರಲಿಲ್ಲ. ಮೊದಲನೇ ಮಗು ಗಂಡಾಗಬೇಕಿತ್ತು ಎಂದು ಮೊದಮೊದಲು ಬೇಸರ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ. ನಮ್ಮನೆ ಅಷ್ಟೇ ಅಲ್ಲ ಎಲ್ಲರ ಮನೆಯ ಕಥೆಯೂ ಇದೆ. ನನಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ. ಮಹಿಳೆಯರು ಮೊದಲ ಮಗು ಮಾತ್ರ ಗಂಡೇ ಆಗಬೇಕು ಅಂದ್ಕೊಳೋದು ಯಾಕೆ ಎಂಬುದು ನನಗಿನ್ನೂ ಅರ್ಥವೇ ಆಗಿಲ್ಲ ಎಂದಿದ್ದಾರೆ.

ಒಂದು ಪ್ರಶ್ನೆ ಕೇಳ್ತೀನಿ ಉತ್ತರ ಹೇಳಿ

ನನ್ನ ಮಗಳಿಗೆ ಹೆಣ್ಣು ಹುಟ್ಟಿದಾಗ ನನ್ನಾಕೆ ಬೇಸರಿಸಿಕೊಂಡಿದ್ದಳು. ಆದರೆ ಐಶ್ವರ್ಯಾ ಬೆಳೆದಿರುವ ರೀತಿ, ಮಾಡುತ್ತಿರುವ ಕೆಲಸ, ಸಾಧನೆಯನ್ನು ನೋಡಿ ನಾನು ಹೆಮ್ಮೆಪಡುತ್ತೇನೆ. ಹೆಣ್ಣುಮಕ್ಕಳ ಬಗ್ಗೆ ನನ್ನ ಪ್ರೀತಿ ದುಪ್ಪಟ್ಟಾಗಿದೆ. ಈಗಿನ ಹೆಣ್ಣುಮಕ್ಕಳು ಗಂಡು ಮಕ್ಕಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ನಿಮಗೆ ಬೇಜಾರಾಗೋದಿಲ್ಲ ಅಂದ್ರೆ ಈ ಪ್ರಶ್ನೆಗೆ ಉತ್ತರ ಕೊಡಿ. ಯಾಕೆ ಮೊದಲ ಮಗು ಗಂಡಾಗಬೇಕು? ಎಂದು ಮಹಿಳಾಸಮೂಹವನ್ನುದ್ದೇಶಿಸಿ ಪ್ರಶ್ನಿಸಿದಾಗ ಎಲ್ಲ ಹೆಣ್ಣುಮಕ್ಕಳು ಜೋರಾಗಿ ನಕ್ಕಿದ್ದಾರೆ.

ಸ್ವಾವಲಂಬಿ ಬದುಕಿಗಾಗಿ ಗ್ಯಾರಂಟಿ

ಭಾರತದಲ್ಲಿ ಈ ಆಲೋಚನೆ ಹೋಗಬೇಕು. ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ಆಲೋಚನೆ ತಲೆಯಿಂದ ತೆಗೆದುಹಾಕಬೇಕು. ಅನೇಕ ವಿಶ್ವ ಮಹಿಳಾ ನಾಯಕರ ಸಾಧನೆಗಳನ್ನು ನೋಡಿಯೂ ಗಂಡು ಮಗು ಹುಟ್ಟಲಿ ಎಂದು ಕೇಳೋದ್ಯಾಕೆ? ಇತಿಹಾಸದಿಂದಲೂ ಹೆಣ್ಣುಮಕ್ಕಳಿಗೆ ಹೆಚ್ಚಿನ ಗೌರವ, ಪ್ರಾಮುಖ್ಯತೆ ಇದೆ. ರಾಮನಿಗಿಂತ ಸೀತೆಯ ತ್ಯಾಗ ಮಿಗಿಲು, ಮಹಾಭಾರತದ ಕುಂತಿಯ ಪಾತ್ರ ಮರೆತು ಹೋದೆರಾ ಎಂದು ಪ್ರಶ್ನಿಸಿದ್ದಾರೆ. ಭೂಮಿ ಮೇಲೆ ಇರುವ ಯಾವುದೇ ಕೆಲಸದ ಫೀಲ್ಡ್‌ನಲ್ಲಿ ಹೆಣ್ಣುಮಕ್ಕಳಿಲ್ಲ ಎಂದು ಹೇಳೋಕೆ ಸಾಧ್ಯವಿಲ್ಲ. ಅವರಿಲ್ಲದೆ ಜಗತ್ತು ಚಲಿಸೋದಿಲ್ಲ. ಅವರಿಗೆ ಸೂಕ್ತವಾದ ಸಪೋರ್ಟ್‌ ದೊರೆತರೆ ಆಕೆ ಮುನ್ನುಗ್ಗುವುದನ್ನು ತಡೆಯಲು ಸಾಧ್ಯವೇ ಇಲ್ಲ ಎಂದಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಹಿಂದೆ ಇರುವ ಉದ್ದೇಶವೂ ಇದೆ. ಕೊಡುವ ಹಣವನ್ನು ಕೂಡಿಟ್ಟ ಹೆಣ್ಣುಮಕ್ಕಳು ಅದರಲ್ಲಿ ಏನೆಲ್ಲಾ ಮಾಡಿಲ್ಲ? ಕೆಲವರು ಹಣ ಕೂಡಿಟ್ಟು ಸಣ್ಣ ಬ್ಯುಸಿನೆಸ್‌ ಆರಂಭಿಸಿದರೆ, ಇನ್ನೂ ಹಲವರು ಸಮಾಜ ಸೇವೆಗೆ ಹಣ ನೀಡಿದ್ದಾರೆ. ಮಹಿಳೆಯರ ಕನಸನ್ನು ಸಾಕಾರಗೊಳಿಸಲು ನಾವು ಸಹಕರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !