September 3, 2026
Thursday, September 3, 2026
spot_img

ಕುತ್ತಾರು ಸರ್ಕಲ್ ವಿವಾದಕ್ಕೆ ಮಂಗಳ: ನೂತನ‌ ‘ಸೌಹಾರ್ದ ವೃತ್ತ’ ಉದ್ಘಾಟಿಸಿದ ಸಚಿವ ಖಾದರ್

ಹೊಸದಿಗಂತ ವರದಿ ಉಳ್ಳಾಲ:

ವೃತ್ತದ ನಾಮಕರಣ ವಿಚಾರದಲ್ಲಿ ವಿವಾದದ ಕೇಂದ್ರ ಬಿಂದುವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರು ಜಂಕ್ಷನ್ ನಲ್ಲಿ ಕೊನೆಗೂ ಸೌಹಾರ್ದದ ಹೆಸರಲ್ಲಿ ವೃತ್ತವೊಂದು ನಿರ್ಮಾಣಗೊಂಡಿದೆ.

ನೂತನವಾಗಿ ನಿರ್ಮಾಣಗೊಂಡಿರುವ ಸೌಹಾರ್ದ ವೃತ್ತವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಲೋಕಾರ್ಪಣೆಗೊಳಿಸಿದರು.

ಕಳೆದ ಮೇ ತಿಂಗಳಿನಲ್ಲಿ ಕುತ್ತಾರು ಜಂಕ್ಷನ್ ನಲ್ಲಿ ನಿಟ್ಟೆ ಪರಿಗಣಿತ ವಿವಿ ಪ್ರಾಯೋಜಕತ್ವದಲ್ಲಿ ವೃತ್ತವೊಂದನ್ನ ನಿರ್ಮಿಸುತ್ತಿರುವ ಹಂತದಲ್ಲಿ ವೃತ್ತಕ್ಕೆ ಕೊರಗಜ್ಜನ ಹೆಸರು ಇಡಬಾರದೆಂದು ಆಕ್ಷೇಪ ವ್ಯಕ್ತಪಡಿಸಿ ಸ್ಥಳೀಯ ಶಾಸಕರು ಹಾಗೂ ಸ್ಪೀಕರ್ ಆಗಿದ್ದ ಯು.ಟಿ. ಖಾದರ್ ಅವರಿಗೆ ಮದನಿ ನಗರದ ಜುನೈದ್ ಮತ್ತು ಹತ್ತು ಜನ ಸಹಚರರು ಘೇರಾವ್ ಹಾಕಿ ತರಾಟೆಗೈದಿದ್ದ ಪ್ರಕರಣವು ಭಾರೀ ಸುದ್ದಿಯಾಗಿತ್ತು. ಗಲಾಟೆ ನಡೆಸಿದ್ದ ಆರೋಪಿಗಳ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

ಇದೀಗ ಸರ್ಕಲ್ ವಿವಾದಕ್ಕೆ ಮಂಗಳ ಎಂಬಂತೆ ಕುತ್ತಾರು ಜಂಕ್ಷನ್ ನಲ್ಲಿ ಸೌಹಾರ್ದ ವೃತ್ತ ನಿರ್ಮಾಣಗೊಂಡಿದ್ದು ವೃತ್ತದ ಮುಕುಟಕ್ಕೆ ಕೊರಗಜ್ಜನ ಮುಟ್ಟಾಲೆ ಮತ್ತು ದಂಟೆಯ ಹೊಳಪಿನ‌ ಪ್ರತಿಕೃತಿಯನ್ನ ಅಳವಡಿಸಲಾಗಿದೆ. ವೃತ್ತದಲ್ಲಿ ಕೊರಗಜ್ಜನ ಆದಿಕ್ಷೇತ್ರ, ರಾಣಿಪುರ ಚರ್ಚ್, ಕುಂಡೂರು ಜುಮಾ ಮಸೀದಿಗೆ ತೆರಳುವ ದಾರಿಯ ಮಾರ್ಗಸೂಚಿ ಫಲಕವನ್ನು ಅಳವಡಿಸಲಾಗಿದೆ.

ನೂತನ ಸೌಹಾರ್ದ ವೃತ್ತವನ್ನ ಉದ್ಘಾಟಿಸಿದ ಸಚಿವ ಖಾದರ್ ಅವರು ಮಾತನಾಡಿ, ಧಾರ್ಮಿಕ ನಂಬಿಕೆಗಳು ದೌರ್ಬಲ್ಯವಲ್ಲ, ಅದು ಈ ಮಣ್ಣಿನ ಶಕ್ತಿಯಾಗಿದೆ. ಎಲ್ಲಾ ಧರ್ಮಗಳ ಸಂದೇಶವು ಇನ್ನೊಬ್ಬನ ದೇಹದ ಗಾಯ,ಮನಸ್ಸಿನ ನೋವನ್ನ ಗುಣಪಡಿಸುವ ಔಷಧವಾಗಿದೆ. ಈ ಸರ್ಕಲ್ ಅನಾವಾರಣದ ಮೂಲಕ ಇಡೀ ದೇಶಕ್ಕೆ ಕುತ್ತಾರಿನಿಂದಲೇ ಸೌಹಾರ್ದ ಸಂದೇಶ ರವಾಣೆಯಾಗಬೇಕು. ಅಭಿವೃದ್ಧಿಯ ಪರ್ವ ಇಲ್ಲಿಗೆ ನಿಲ್ಲದೆ, ಕುತ್ತಾರಿನಿಂದ ಅಂಬ್ಲಮೊಗರು ರಸ್ತೆ ಅಗಲೀಕರಣಕ್ಕೆ ನಾಳೆಯೇ ಚಾಲನೆ ನೀಡಲಿದ್ದೇವೆ. ಅದಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ಮೂರು ಕೋಟಿ ಅನುದಾನವನ್ನೂ ಮೀಸಲಿಡಲಾಗಿದೆ. ಕುತ್ತಾರು ಪ್ರದೇಶವು ಭವಿಷ್ಯದಲ್ಲಿ ಸೌಹಾರ್ಧತೆ ಸೋದರತೆಯ ಪ್ರದೇಶವಾಗಲಿದೆ. ಉಳ್ಳಾಲಕ್ಕೆ ಇಪ್ಪತ್ತು ಶೇಕಡ ಅಧಿಕ ಪ್ರವಾಸಿಗರು ಬರಲು ಕೊರಗಜ್ಜನ ಕ್ಷೇತ್ರ ಕಾರಣವಾಗಿದೆಯೆಂದರು.

ಕುತ್ತಾರು ಪಂಜಂದಾಯ,ಬಂಟ, ವೈದ್ಯನಾಥ, ಆದಿ ಕೊರಗತನಿಯ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರರಾದ ಬಿ.ಶ್ರೀಧರ ಶೆಟ್ಟಿ ಮಾಗಣತ್ತಡಿ, ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಟ್ರಸ್ಟ್ ನ ಉಪಾಧ್ಯಕ್ಷರಾದ ಎಮ್.ಮಹಾಬಲ ಹೆಗ್ಡೆ ದೆಬ್ಬೇಲಿ, ಪ್ರಮುಖರಾದ ರತ್ನಾಕರ ಕಾವ ಕುತ್ತಾರ್ ಗುತ್ತು, ರಾಜಣ್ಣ ಬೋಳ್ಯಗುತ್ತು, ಪದ್ಮನಾಭ ಶೆಟ್ಟಿ ಗೇಣಿಮನೆ, ನಿಟ್ಟೆ ಪರಿಗಣಿತ ವಿವಿಯ ಕುಲಾಧಿಪತಿ ವಿಶಾಲ್ ಹೆಗ್ಡೆ, ಸಾರ್ವಜನಿಕ ಸಂಪರ್ಕಾಧಿಕಾರಿ ಹೇಮಂತ್ ಶೆಟ್ಟಿ, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕಣಚೂರು ಮೋನು, ಮದನಿನಗರ ಜುಮಾ ಮಸೀದಿ ಅಧ್ಯಕ್ಷರಾದ ಅಝೀಝ್, ರಾಣಿಪುರ ಚರ್ಚ್ ನ ಧರ್ಮಗುರುಗಳಾದ ಎರಿಕ್ ಕ್ರಾಸ್ತಾ, ಕುತ್ತಾರು ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ಪವಿತ್ರಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !