October 14, 2026
Wednesday, October 14, 2026
spot_img

ರಸ್ತೆ ಅಭಿವೃದ್ಧಿಗೆ ಕೇಂದ್ರದಿಂದ 23 ಕೋಟಿ ರೂ; ಚಿತ್ರದುರ್ಗ ಕ್ಷೇತ್ರಕ್ಕೆ ಭರ್ಜರಿ ಅನುದಾನ: ಗೋವಿಂದ ಕಾರಜೋಳ

ಹೊಸದಿಗಂತ ವರದಿ ಚಿತ್ರದುರ್ಗ:

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ರಸ್ತೆ ಮತ್ತು ಮೂಲಸೌಲಭ್ಯ ನಿಧಿಯಿಂದ 23 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.

ಕೇಂದ್ರ ಹೆದ್ದಾರಿ ಸಚಿವಾಲಯದಿಂದ ಮಂಜೂರಾಗಿರುವ ಈ ಅನುದಾನವನ್ನು ಕ್ಷೇತ್ರದ ವಿವಿಧ ತಾಲೂಕುಗಳ ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಬಳಸಲಾಗುವುದು. ಚಿತ್ರದುರ್ಗ ತಾಲೂಕಿನಲ್ಲಿ ಜಾನುಕೊಂಡ-ಬುರುಜನರೊಪ ರಸ್ತೆಯಿಂದ ಅನ್ನೇಹಾಳ್-ವಡ್ಡರಹಟ್ಟಿ ರಸ್ತೆಯವರೆಗೆ ವಿವಿಧ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ 3 ಕೋಟಿ ಅನುದಾನ ನೀಡಲಾಗಿದೆ.

ಚಳ್ಳಕೆರೆ ತಾಲೂಕಿನಲ್ಲಿ ದೊಡ್ಡೇರಿಯಿಂದ ಓಬೇನಹಳ್ಳಿ ಸಂಪರ್ಕಿಸುವ ರಸ್ತೆಯ ವಿವಿಧ ಭಾಗಗಳ ಅಭಿವೃದ್ಧಿಗೆ 3 ಕೋಟಿ, ಮೊಳಕಾಲ್ಮೂರು ತಾಲೂಕಿನಲ್ಲಿ ನಾಯಕನಹಟ್ಟಿಯಿಂದ ತೊರೆಕೋಲಮ್ಮನಹಳ್ಳಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ 3 ಕೋಟಿ ಮಂಜೂರಾಗಿದೆ. ಹಿರಿಯೂರು ತಾಲೂಕಿನಲ್ಲಿ ಚಳ್ಳಕೆರೆ-ವಿಶ್ವನಾಥನಹಳ್ಳಿ ಸಂಪರ್ಕಿಸುವ ರಸ್ತೆಯ ಆಯ್ದ ಭಾಗಗಳ ಅಭಿವೃದ್ಧಿಗೂ 3 ಕೋಟಿ ಅನುದಾನ ದೊರೆತಿದೆ.

ಹೊಸದುರ್ಗ ತಾಲೂಕಿನಲ್ಲಿ ಶಿವಗಂಗಾದಿಂದ ಅಮ್ಮನಹಟ್ಟಿ ರಸ್ತೆ ಸಂಪರ್ಕಿಸುವ ಮಾರ್ಗದ ಅಭಿವೃದ್ಧಿಗೆ 3 ಕೋಟಿ ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ ಕಡೂರು-ಹಿರೇನಲ್ಲೂರು-ಅಜ್ಜಂಪುರ-ಯರಗನಹಳ್ಳಿ ರಸ್ತೆಯ ವಿವಿಧ ಭಾಗಗಳ ಅಭಿವೃದ್ಧಿಗೆ 3 ಕೋಟಿ ಅನುದಾನ ನೀಡಲಾಗಿದೆ.

ಇದನ್ನೂ ಓದಿ:

ಇದರ ಜೊತೆಗೆ, ಸಿರಾ ತಾಲೂಕಿನ ಪಟ್ಟನಾಯಕನಹಳ್ಳಿ-ಬರಗೂರು-ಹಾರೋಗೆರೆ ಮೂಲಕ ಆಂಧ್ರಪ್ರದೇಶ ಗಡಿಗೆ ಸಂಪರ್ಕಿಸುವ ರಸ್ತೆಗೆ 2.50 ಕೋಟಿ ಹಾಗೂ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವಿರುಪಸಮುದ್ರ ಗ್ರಾಮದಲ್ಲಿ ಆಂಧ್ರಪ್ರದೇಶ ಗಡಿಯಿಂದ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗೆ 2.50 ಕೋಟಿ ಅನುದಾನ ಮಂಜೂರಾಗಿದೆ.

ಮಂಜೂರಾಗಿರುವ ಕಾಮಗಾರಿಗಳಿಗೆ ಇನ್ನೊಂದು ತಿಂಗಳೊಳಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳನ್ನು ಆರಂಭಿಸುವಂತೆ ಹೆದ್ದಾರಿ ವಿಭಾಗ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಾರಜೋಳ ತಿಳಿಸಿದ್ದಾರೆ.

ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ತಮ್ಮ ಶಿಫಾರಸ್ಸಿನ ಮೇರೆಗೆ ಅನುದಾನ ಬಿಡುಗಡೆ ಮಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಸಂಸದ ಗೋವಿಂದ ಎಂ. ಕಾರಜೋಳ ಅಭಿನಂದನೆ ಸಲ್ಲಿಸಿದ್ದಾರೆ. ಈ ಅನುದಾನದಿಂದ ಗ್ರಾಮೀಣ ಪ್ರದೇಶಗಳ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದೆ.

Must Read