ಹೊಸದಿಗಂತ ವರದಿ ರಾಯಚೂರು :
ರೈತರ ಜಲಂತ ಸಮಸ್ಯೆಗಳ ಚರ್ಚಿಸುವುದಕ್ಕೆ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಒತ್ತಾಯಿಸಿದರು. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ಗ್ರಾಮದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕೈಗೊಂಡಿರುವ ಪಾದಯಾತ್ರೆಯ ಮೂರನೇ ದಿನದ ಪಾದಯಾತ್ರೆಯನ್ನು ಆರಂಭಿಸುವುದಕ್ಕೂ ಪೂರ್ವದಲ್ಲಿ ಗ್ರಾಮದ ಕರಿಬಸವೇಶ್ವರ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರೈತರ ಎಲ್ಲ ಬ್ಯಾಂಕುಗಳಲ್ಲಿನ ಐದು ಲಕ್ಷ ಸಾಲವನ್ನು ಮನ್ನಾ ಮಾಡಿ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ರಾಜ್ಯದಲ್ಲಿನ ಭೀಕರ ಬರಗಾಲದಿಂದ ಇವರೆಗೆ 3650 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಒಟ್ಟು 937 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕಲಬುರ್ಗಿ 294 ರೈತರು, ರಾಯಚೂರು 169, ಬೀದರ 220 ಕ್ಕೂ ಹೆಚ್ಚು ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಆದರೆ ಸರ್ಕಾರ ಯಾವುದೇ ಸ್ಪಂದನೆ ಇಲ್ಲ ಹಾಗೂ ರೈತರ ಕುರಿತಾದ ಸಮಸ್ಯೆಗಳನ್ನು ಈ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಕ್ಎಓಶ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆಯಲ್ಲಿ ಕಳೆದ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಖರೀದಿ ಮಾಡಿರುವ ಜೋಳದ 147 ಕೋಟಿ ಹಣವನ್ನು ತಕ್ಷಣ ಬಿಡುಗಡೆ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ಅವರ ಹಣವನ್ನು ಬಿಡುಗಡೆ ಮಾಡಬೇಕು ಎಂದರು. ಯಡಿಯೂರಪ್ಪ ಸರ್ಕಾದ ಅವಧಿಯಲ್ಲಿ ನೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿದ್ದರು ಆದರೆ ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಅದನ್ನು ಹಿಂಪಡೆಯಿತು. ಯಡಿಯೂರಪ್ಪ ಅವಧಿಯಲ್ಲಿ ಖರೀದಿ ಮಾಡಿದಕ್ಕೂ ಹಣ ನೀಡಲಿಲ್ಲ ಎಂದು ಹೇಳಿದರು.
ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ 37 ಟಿಎಂಸಿ ಹೂಳು ತುಂಬಿದೆ ಈ ನೀರನ್ನು ಸರಿದೂಗಿಸುವುದಕ್ಕೆ ಪರ್ಯಾಯವಾಗಿ ನವಲಿ ಜಲಾಶಯ ನಿರ್ಮಾಣಕ್ಕೆ ಯಡಿಯೂರಪ್ಪ 14 ಕೋಟಿ ಹಣ ಬಿಡಯಗಡೆ ಮಾಡಿದ್ದರು ಆದರೆ ಈ ಸರ್ಕಾರ ಇದನ್ನು ಮರೆತಿದೆ. ಮುಂದಿನ ಆಯವ್ಯದಲ್ಲಿ ನವಲಿ ಜಲಾಶಯದ ನಿರ್ಮಾಣಕ್ಕೆ 14ಕೋಟಿ ಮೀಸಲಿಟ್ಟು ಜಲಾಶಯ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಗ್ರಾಮೀಣ ಭಾಗದ ಜನತೆಯ ಸಂಕಷ್ಟಕ್ಕೆ ಸರ್ಕಾರ ಸ್ಪಂದನೆಯಿಲ್ಲ. ಬೆಂಗಳೂರಿನ ರಿಯಲ್ ಎಸ್ಟೇಟ್ ಬಗ್ಗೆ ಚಿಂತೆ ನಾಡುತ್ತಿರುವ ಸಮಯದ ಕಾಲು ಭಾಗದಷ್ಟಾದರೂ ರೈತರ ಬಗ್ಗೆ ವಿಚಾರ ಮಾಡಿದರೆ ರೈತರ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಹುದುಆದರೆ ಮುಖ್ಯಮಂತ್ರಿಗಳ ರೈತರ ಕಾಳಜಿ ಬಗ್ಗೆ ಚಿಂತನೆ ಮಾಡುವುದಕ್ಕೆ ಸಮಯವೇ ಇಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದ್ದರು. ಎಸ್.ಸಿ.ಪಿ/ ಟಿ.ಎಸ್.ಪಿ ಅನುದಾನ ಬೇರೆಯದಕ್ಕೆ ಬಳಕೆಮಾಡಿಕೊಂಡಿದೆ. ಈ ಸರ್ಕಾರ ರೈತರ ಪರ ಇರುವದಾಗಿ ಹೇಳಿಕೆ ಮತ್ತು ಘೋಷಣೆಗೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಿದರು. ವಿಡಿಯೋ ಸಂವಾದದಿಂದ ಬರಗಾಲದ ಪರಿಸ್ಥಿತಿ ಅರ್ಥವಾಗುವುದಿಲ್ಲ ರೈತರ ಜಮೀನಿಗೆ ಆಗಮಿಸಿ ಬರ ಅಧ್ಯಯನ ಮಾಡಿದಾಗ ಮಾತ್ರ ಅಸ್ಪಷ್ಟವಾದ ಬೆಳೆ ಹಾನಿ ಕುರಿತು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸರ್ಕಾರಕ್ಕೆ ಕುಟುಕಿದರು. ರಾಜ್ಯ ಬಿಜೆಪಿ ಕೈಗೊಂಡಿರುವ ಪಾದಯಾತ್ರೆ ನಡೆಯುವ ಸ್ಥಳಗಳಲ್ಲಿ ಕಪ್ಪು ಬಟ್ಟೆ ಪ್ರದರ್ಶನ ಮಾಡುವದಾಗಿ ಕಾಂಗ್ರೆಸ್ಸಿನ ಹೇಳಿಕೆಗೆ ತಿರುಗೇಟು ನೀಡಿದ ಬಿವೈವಿ ಕಾಂಗ್ರೆಸ್ಸಿನವರು ನಮ್ಮ ಪಾದಯಾತ್ರೆಗೆ ಕಪ್ಪು ಬಾವುಟ ಪ್ರದರ್ಶವನ್ಬಾದರೂ ಮಾಡಲಿ, ಪ್ರತಿಭಟನೆಯನ್ನಾದರೂ ಮಾಡಲಿ, ಈ ಸಂದರ್ಭದಲ್ಲಿ ನಮ್ಮನ್ನು ಭಂದಿಸಿದರೂ ನಾವು ಅಂಜುವುದಿಲ್ಲ. ನಮ್ಮ ಪ್ರತಿಭಟನೆ ಮುಂದು ವರೆಯುತ್ತಲೇ ಇರುತ್ತದೆ. ಇಂತಹ ಗೊಡ್ಡ ಬೆದರಿಕೆಗೆ ಇಲ್ಲಿ ಯಾರೂ ಅಂಜುವವರಿಲ್ಲ ಎಂದರು.
ಈ ಸಂರ್ಭದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು, ಎ.ಎಸ್.ನಡಹಳ್ಳಿ, ಎಮ್.ನಾಗರಾಜ, ಮಾಜಿ ಶಾಸಕ ಪ್ರಕಾಶಗೌಡ ಪಾಟೀಲ ಸೇರಿದಂತೆ ಇತರರಿದ್ದರು.



