ಹೊಸದಿಗಂತ ವರದಿ ಅಂಕೋಲಾ:
ಅಡುಗೆ ಅನಿಲ ತುಂಬಿದ ಟ್ಯಾಂಕರ್ ವಾಹನ ಪಲ್ಟಿಯಾಗಿ ಕೆಲ ಕಾಲ ಹೆದ್ದಾರಿ ಸಂಚಾರಕ್ಕೆ ಅಡ್ಡಿಯಾದ ಘಟನೆ ಪಟ್ಟಣ ವ್ಯಾಪ್ತಿಯ ವಿಠ್ಠಲಘಾಟ್ ಅಂಬೇಡ್ಕರ್ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.
ಮಂಗಳೂರಿನಿಂದ ಹುಬ್ಬಳ್ಳಿ ಕಡೆ ತೆರಳುತ್ತಿದ್ದ ಎಲ್.ಪಿ.ಜಿ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಉರುಳಿದ್ದರಿಂದ ಕೆಲಕಾಲ ಆತಂಕದ ವಾತಾವರಣಕ್ಕೆ ಕಾರಣವಾಯಿತು.
ಟ್ಯಾಂಕರ್ ಬಿದ್ದ ಸ್ಥಳದ ಆಸುಪಾಸಿನಲ್ಲಿ ಹಲವಾರು ಮನೆಗಳಿದ್ದು ಅನಿಲ ಸೋರಿಕೆಯಾದರೆ ಭಾರೀ ದುರಂತ ಸಂಭವಿಸುವ ಸಾಧ್ಯತೆ ಇರುವುದರಿಂದ ಅಂಕೋಲಾ ಪೊಲೀಸರು ಮತ್ತು,ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಮತ್ತು ಅಂಕೋಲಾ ಸಂಪರ್ಕ ರಸ್ತೆಯಲ್ಲಿ ಕೆಲಕಾಲ ವಾಹನಗಳ ಸಂಚಾರ ಬಂದ್ ಮಾಡಿ ಟ್ಯಾಂಕರ್ ನಿಂದ ಯಾವುದೇ ರೀತಿಯ ಅನಿಲ ಸೋರಿಕೆ ಆಗುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಯಿತು. ಬುಧವಾರ ರಾತ್ರಿ ಪಟ್ಟಣದಲ್ಲಿ ವ್ಯಾಪಕ ಮಳೆಯಾಗಿರುವ ಕಾರಣ ಸುರಿಯುತ್ತಿರುವ ಮಳೆಯಲ್ಲಿ ವಾಹನ ಚಲಾಯಿಸುವಾಗ ಸರಿಯಾಗಿ ರಸ್ತೆ ಕಾಣದೆ ಟ್ಯಾಂಕರ್ ಚಾಲಕ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದ್ದು ಅದೃಷ್ಟವಶಾತ್ಯಾ ವುದೇ ಅನಾಹುತ ಸಂಭವಿಸಿಲ್ಲ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಕೂಲ ವಾತಾವರಣ ಇರುವ ಸಂದರ್ಭದಲ್ಲಿ ಅಪಾಯಕಾರಿ ಸರಕುಗಳನ್ನು ಸಾಗಿಸುವ ವಾಹನಗಳ ಚಾಲಕರು ಸುರಕ್ಷತೆಗೆ ಮಹತ್ವ ನೀಡಬೇಕು ಎಂಬ ಅಭಿಪ್ರಾಯ ಸ್ಥಳೀಯರಿಂದ ಕೇಳಿ ಬಂದಿದೆ.
ಕುಮಟಾ ಸಮೀಪದ ಬರ್ಗಿ ಬಳಿ 2015 ರ ಸೆಪ್ಟೆಂಬರ್ 1 ರಂದು ಅನಿಲ ಟ್ಯಾಂಕರ್ ಜನವಸತಿ ಪ್ರದೇಶದಲ್ಲಿ ಪಲ್ಟಿಯಾಗಿ ಅನಿಲ ಸೋರಿಕೆಯಾಗಿ 12 ಜನರು ಬಲಿಯಾಗಿದ್ದರು,ಇದೀಗ ಸೆಪ್ಟೆಂಬರ್ 2 ರಂದು ಅಂಕೋಲಾದ ಜನವಸತಿ ಪ್ರದೇಶದಲ್ಲಿ ಅನಿಲ ತುಂಬಿದ ಟ್ಯಾಂಕರ್ ಪಲ್ಟಿಯಾಗಿದ್ದು ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ.



