ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಮಾರು 10 ವರುಷಗಳ ಕಾಲ ಬೆಳ್ಳಿಪರದೆಯಿಂದ ದೂರವಿದ್ದ ನಟಿ ಪ್ರೀತಿ ಜಿಂಟಾ, ‘ಬಟ್ವಾರಾ 1947’ ಸಿನಿಮಾದ ಮೂಲಕ ಅದ್ಧೂರಿ ಕಮ್‌ಬ್ಯಾಕ್ ಮಾಡಿದ್ದರು. ಅದರ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ಸಿನಿಮಾದೊಂದಿಗೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಕುನಾಲ್ ಖೇಮು ನಿರ್ದೇಶನದ ‘ವೈಬ್’ ಸಿನಿಮಾದಲ್ಲಿ ಪ್ರೀತಿ ನಟಿಸಿದ್ದು, ಇತ್ತೀಚೆಗೆ ನಡೆದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ತಾವು ಪಟ್ಟ ಶ್ರಮ ಮತ್ತು ಸುದೀರ್ಘ ಕೆಲಸದ ಅವಧಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಸಿನಿಮಾ ರಂಗದಲ್ಲಿ ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕು ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿರುವಾಗ, ಪ್ರೀತಿ ಜಿಂಟಾ ಅವರು ‘ವೈಬ್’ ಸಿನಿಮಾಗಾಗಿ ದಿನಕ್ಕೆ ಸತತ 18 ಗಂಟೆಗಳ ಕಾಲ ಕೆಲಸ ಮಾಡಿದ್ದಾಗಿ ಹೇಳಿದ್ದಾರೆ. “ನಾನು ಅಮೆರಿಕದಲ್ಲಿದ್ದ ನನ್ನ ಮಕ್ಕಳನ್ನು ಬಿಟ್ಟು ಭಾರತಕ್ಕೆ ಬಂದಿದ್ದೆ. ಕೇವಲ 30-40 ದಿನಗಳ ಶೂಟಿಂಗ್ ಕಾಲ್ ಶೀಟ್ ಇತ್ತು. ಆದಷ್ಟು ಬೇಗ ಕೆಲಸ ಮುಗಿಸಿ ಮಕ್ಕಳ ಬಳಿಗೆ ಓಡಿಹೋಗಬೇಕು ಎಂಬ ಒಂದೇ ಕಾರಣಕ್ಕೆ ದಿನಕ್ಕೆ 18 ಗಂಟೆ ನಾನ್‌ಸ್ಟಾಪ್ ಕೆಲಸ ಮಾಡಲು ನಾನೇ ಸ್ವತಃ ಒಪ್ಪಿಕೊಂಡೆ” ಎಂದು ಪ್ರೀತಿ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಇಂಡಿಯಾದಲ್ಲಿದ್ದಾಗ ಯಾವುದೇ ಪಾರ್ಟಿ, ಗೆಟ್-ಟುಗೆದರ್ ಅಂತ ಹೊರಗಡೆ ಹೋಗದೇ ಸಂಪೂರ್ಣವಾಗಿ ಕೆಲಸದ ಮೇಲೆಯೇ ಗಮನ ಇತ್ತು ಎಂದು ಅವರು ಹೇಳಿದ್ದಾರೆ.
ಅಂದಹಾಗೆ, ಕಳೆದ ವರುಷ ನಟಿ ದೀಪಿಕಾ ಪಡುಕೋಣೆ ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡುವುದಾಗಿ ಹೇಳಿ, ಸಂದೀಪ್ ರೆಡ್ಡಿ ವಂಗಾ ಅವರ ‘ಸ್ಪಿರಿಟ್’ ಸಿನಿಮಾದಿಂದ ಹೊರಬಂದಿದ್ದರು ಎಂಬ ವರದಿಗಳ ನಂತರ ಇಂಡಸ್ಟ್ರಿಯಲ್ಲಿ ಈ ಕೆಲಸದ ಸಮಯದ ಬಗ್ಗೆ ಚರ್ಚೆ ಶುರುವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರೀತಿ, “ಪ್ರತಿಯೊಬ್ಬರ ಪರಿಸ್ಥಿತಿಯೂ ಬೇರೆ ಬೇರೆ ಇರುತ್ತೆ, ಯಾರಿಗೆ ಹೇಗೆ ಅನುಕೂಲವೋ ಹಾಗೆ ಮಾಡುತ್ತಾರೆ” ಎಂದಿದ್ದಾರೆ.

ಕುನಾಲ್ ಖೇಮು ಅವರ ‘ಮಡಗಾಂವ್ ಎಕ್ಸ್‌ಪ್ರೆಸ್’ ಹಿಟ್ ಆದ ನಂತರ ಮೂಡಿಬರುತ್ತಿರುವ ಈ ‘ವೈಬ್’ ಸಿನಿಮಾದಲ್ಲಿ ಸ್ಪರ್ಶ್ ಶ್ರೀವಾಸ್ತವ್, ವಂಶಿಕಾ ಧೀರ್ ಹಾಗೂ ದಿನೇಶ್ ಲಾಲ್ ಯಾದವ್ ಪ್ರಮುಖ ಪಾತ್ರಗಳಲ್ಲಿದ್ದು, ಸೆಪ್ಟೆಂಬರ್ 18ಕ್ಕೆ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಲು ರೆಡಿಯಾಗಿದೆ.



