September 5, 2026
Saturday, September 5, 2026
spot_img

ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಕನಸು ನನಸಾಗುವತ್ತ: ಇಂದು ಘಾಟ್ ಸೆಕ್ಷನ್‌ನಲ್ಲಿ ಟ್ರಯಲ್ ರನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರು ಮತ್ತು ಮಂಗಳೂರು ನಡುವೆ ಅತ್ಯಾಧುನಿಕ ‘ವಂದೇ ಭಾರತ್‌’ ರೈಲು ಸೇವೆಗಾಗಿ ಕಾಯುತ್ತಿರುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯಿಂದ ಒಂದು ಬಿಗ್ ಅಪ್‌ಡೇಟ್ ಸಿಕ್ಕಿದೆ. ಹೌದು, ಇಂದು ರೈಲ್ವೆ ಇಲಾಖೆಯು 16 ಬೋಗಿಗಳ ಖಾಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವನ್ನು ನಡೆಸುತ್ತಿದೆ.‌

ಈ ಪ್ರಾಯೋಗಿಕ ಸಂಚಾರವು ಯಶವಂತಪುರ ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ನಡೆಯುತ್ತಿದ್ದು, ರೈಲಿನ ವೇಗ, ಪ್ರಯಾಣದ ಸಮಯ ಮತ್ತು ಪ್ರಮುಖವಾಗಿ ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಘಾಟಿ ಪ್ರದೇಶದಲ್ಲಿ ರೈಲಿನ ಕಾರ್ಯಾಚರಣೆಯನ್ನು ಪರೀಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇದು ಕೇವಲ ಟ್ರಯಲ್ ರನ್ ಆಗಿರುವುದರಿಂದ ಇದರಲ್ಲಿ ಯಾವುದೇ ಪ್ರಯಾಣಿಕರಿಗೆ ಅವಕಾಶವಿರುವುದಿಲ್ಲ.

ಯಶವಂತಪುರದಿಂದ ಮಂಗಳೂರಿನ ಕಡೆಗೆ

ಶನಿವಾರ ಬೆಳಿಗ್ಗೆ 6:5 ಗಂಟೆಗೆ ಯಶವಂತಪುರ ಜಂಕ್ಷನ್‌ನಿಂದ ಹೊರಟಿರುವ ವಂದೇ ಭಾರತ್ ರೈಲು, ಬೆಳಿಗ್ಗೆ 9:00 ಗಂಟೆಗೆ ಹಾಸನ ಜಂಕ್ಷನ್ ತಲುಪಿ, ಅಲ್ಲಿ ಐದು ನಿಮಿಷಗಳ ಕಾಲ ನಿಂತು ಬೆಳಿಗ್ಗೆ 9:05ಕ್ಕೆ ಹೊರಟು, ಬೆಳಿಗ್ಗೆ 9:55ಕ್ಕೆ ಸಕಲೇಶಪುರ ನಿಲ್ದಾಣವನ್ನು ತಲುಪಲಿದೆ. ಸಕಲೇಶಪುರದಲ್ಲಿ ಐದು ನಿಮಿಷಗಳ ನಿಲುಗಡೆಯ ನಂತರ ಬೆಳಿಗ್ಗೆ 10:00 ಗಂಟೆಗೆ ಘಾಟಿ ಪ್ರದೇಶದ ಕಡೆಗೆ ತನ್ನ ಪ್ರಯಾಣವನ್ನು ಮುಂದುವರಿಸಲಿದೆ. ಘಾಟ್ ಸೆಕ್ಷನ್‌ನ ಸವಾಲುಗಳನ್ನು ದಾಟಿ ಮಧ್ಯಾಹ್ನ 12:30ಕ್ಕೆ ಸುಬ್ರಹ್ಮಣ್ಯ ರೋಡ್ ನಿಲ್ದಾಣವನ್ನು ತಲುಪಲಿರುವ ರೈಲು, ಅಲ್ಲಿ 5 ನಿಮಿಷಗಳ ಕಾಲ ನಿಂತು ಮಧ್ಯಾಹ್ನ 12:35ಕ್ಕೆ ಮಂಗಳೂರಿನ ಕಡೆಗೆ ಚಲಿಸಲಿದೆ. ಮಧ್ಯಾಹ್ನ 2:25 ಗಂಟೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ತಲುಪುವ ಮೂಲಕ ತನ್ನ ಮೊದಲ ಹಂತದ ಪ್ರಯಾಣವನ್ನು ಪೂರ್ಣಗೊಳಿಸಲಿದೆ.

ಮಂಗಳೂರಿನಿಂದ ಯಶವಂತಪುರದ ಕಡೆಗೆ

ಮಂಗಳೂರು ತಲುಪಿದ ಕೆಲವೇ ಸಮಯದ ಬಳಿಕ, ಅಂದರೆ ಮಧ್ಯಾಹ್ನ 3:00 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಈ ರೈಲು ಮರಳಿ ಯಶವಂತಪುರಕ್ಕೆ ತನ್ನ ಪ್ರಯಾಣವನ್ನು ಆರಂಭಿಸಲಿದೆ. ವಾಪಸ್ ಬರುವಾಗ ಮಧ್ಯಾಹ್ನ 03:25ರ ಸುಮಾರಿಗೆ ಪಡೀಲ್ ನಿಲ್ದಾಣವನ್ನು ಪಾಸ್‌ ಆಗಲಿರುವ ರೈಲು, ಸಂಜೆ 4:30ಕ್ಕೆಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ 5 ನಿಮಿಷಗಳ ಕಾಲ ನಿಂತು ಸಂಜೆ 4:35ಕ್ಕೆ ಹೊರಟು, ಸಂಜೆ 6:30ಕ್ಕೆ ಸಕಲೇಶಪುರ ನಿಲ್ದಾಣಕ್ಕೆ ಬಂದು ತಲುಪಲಿದೆ. ಸಕಲೇಶಪುರದಿಂದ ಸಂಜೆ 06:35ಕ್ಕೆ ಹೊರಡುವ ರೈಲು, ರಾತ್ರಿ 7:20ಕ್ಕೆ ಹಾಸನ ತಲುಪಲಿದ್ದು, ಅಲ್ಲಿ ಇತರ ರೈಲುಗಳ ಸಂಚಾರದ ಅನುಕೂಲಕ್ಕಾಗಿ 10 ನಿಮಿಷಗಳ ಕಾಲ ನಿಲ್ಲಲಿದೆ. ಹಾಸನದಿಂದ ಬೆಂಗಳೂರಿನ ಕಡೆಗೆ ವೇಗವಾಗಿ ಮುನ್ನಡೆಯಲಿರುವ ಈ ವಂದೇ ಭಾರತ್ ರೈಲು, ರಾತ್ರಿ 11:00 ಗಂಟೆಗೆ ಯಶವಂತಪುರ ಜಂಕ್ಷನ್ ತಲುಪುವ ಮೂಲಕ ತನ್ನ ಇಡೀ ದಿನದ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಮುಗಿಸಲಿದೆ.

ಇದನ್ನೂ ಓದಿ:

ಸಕಲೇಶಪುರ-ಘಾಟ್ ಸೆಕ್ಷನ್ ಏಕೆ ಪ್ರಮುಖವಾಗಿದೆ?

ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿರುವ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ಘಾಟಿ ಪ್ರದೇಶವು ಅತ್ಯಂತ ಕಠಿಣವಾದ ತಿರುವುಗಳು ಮತ್ತು ಇಳಿಜಾರುಗಳನ್ನು ಹೊಂದಿದೆ. ಹಾಗಾಗಿ, ವಂದೇ ಭಾರತ್ ರೈಲಿನ ಬ್ರೇಕಿಂಗ್, ವೇಗದ ನಿಯಂತ್ರಣ ಮತ್ತು ಸುರಕ್ಷತೆಯನ್ನು ಪರಿಶೀಲಿಸಲು ಈ ಖಾಲಿ ರೈಲನ್ನು ಓಡಿಸಲಾಗುತ್ತಿದೆ.

ಪ್ರಯಾಣಿಕರ ಗಮನಕ್ಕೆ

ಇದು ಕೇವಲ ಪ್ರಾಯೋಗಿಕ ಸಂಚಾರದ ಸಮಯವಾಗಿದ್ದು, ಮುಂದಿನ ದಿನಗಳಲ್ಲಿ ಸುರಕ್ಷತೆಯ ಆಧಾರದ ಮೇಲೆ ರೈಲಿನ ಸಮಯ ಹಾಗೂ ಪ್ರಯಾಣದ ಅವಧಿಯಲ್ಲಿ ಬದಲಾವಣೆಗಳಾಗಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !