ಮನೆಯಲ್ಲಿ ಕಂದನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡೋ ಅಪ್ಪ ಅಮ್ಮ ತಮ್ಮನ್ನು ಬಿಟ್ಟರೆ ಮಗುವನ್ನು ನೋಡಿಕೊಳ್ಳೋಕೆ ನಂಬೋದು ಶಿಕ್ಷಕರನ್ನು ಮಾತ್ರ. ಮೂರು ವರ್ಷಗಟ್ಟಲೆ ಮನೆಯಲ್ಲೇ ಕುಣಿದು ಕುಪ್ಪಳಿಸುತ್ತಿದ್ದ ಕಂದನನ್ನು ಮೊದಲ ದಿನ ಶಾಲೆಗೆ ಕಳಿಸುವಾಗ ಪೋಷಕರ ಕಣ್ಣಲ್ಲಿ ನೀರಿರುತ್ತದೆ. ಅಮ್ಮನೇ ಬೇಕು ಎಂದು ಮಗು ಕಿರುಚಿ ಅಳುವುದನ್ನು ನೋಡಿದಾಗ ಕರುಳು ಕಿತ್ತು ಬಂದಂತೆ ಆಗುತ್ತದೆ. ಆದರೆ ಅದೇ ಮಗು ಕೆಲವೇ ದಿನಗಳಲ್ಲಿ ಭಾನುವಾರವೂ ಶಾಲೆಗೆ ಹೋಗ್ಬೇಕು ಎಂದು ಅಳುತ್ತದೆ. ಇದಕ್ಕೆಲ್ಲಾ ಕಾರಣ ಶಿಕ್ಷಕರು. ಅವರ ಪ್ರೀತಿ, ಸಹನೆ, ತ್ಯಾಗ, ತಾಳ್ಮೆಗೆ ಸಾವಿರ ವಂದನೆಗಳನ್ನು ಹೇಳಿದರೂ ಸಾಲದು.

ಮಕ್ಕಳ ಫಸ್ಟ್ ರೋಲ್ ಮಾಡೆಲ್ ಶಿಕ್ಷಕರು. ಯಾರು ಏನೇ ಹೇಳಿ ನೋಡಿ, ಟೀಚರ್ ಹೇಳಿದ್ದೇ ರೈಟ್. ಅವರು ಮಾಡೋದೇ ಕರೆಕ್ಟ್ ಎಂದು ಮಕ್ಕಳು ಕ್ಷಣವೂ ಯೋಚಿಸದೇ ಹೇಳಿಬಿಡ್ತಾರೆ. ಅಮ್ಮನಂತೆ ಪ್ರೀತಿಸಿ, ತಂದೆಯಂತೆ ಶಿಕ್ಷಿಸಿ ಜಗತ್ತಿನ ಕೆಟ್ಟದ್ದು, ಒಳ್ಳೆಯದು ಎಲ್ಲವನ್ನೂ ಹೇಳಿಕೊಡುವ ಶಕ್ತಿ ಇರೋದು ಶಿಕ್ಷಕರಿಗೆ ಮಾತ್ರ. ಪ್ರತೀ ವರ್ಷದ ಸೆಪ್ಟೆಂಬರ್ ಐದನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನ ಪ್ರತೀ ವಿದ್ಯಾರ್ಥಿಯೂ ತನ್ನ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ. ಜೀವನದಲ್ಲಿ ತಮ್ಮನ್ನು ತಿದ್ದಿದ ಗುರುಗಳಿಗೆ ವಂದನೆ ಹೇಳುತ್ತಾರೆ.

ಭಾರತದ ಮಾಜಿ ರಾಷ್ಟ್ರಪತಿ, ಶ್ರೇಷ್ಠ ಶಿಕ್ಷಣ ತಜ್ಞ ಹಾಗೂ ಭಾರತರತ್ನ ಪುರಸ್ಕೃತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನ ಮಕ್ಕಳೇ ಶಿಕ್ಷಕರಿಗೆ ಸರ್ಪ್ರೈಸ್ ನೀಡಿ, ಗಿಫ್ಟ್ ಕೊಟ್ಟು ಆಟಗಳನ್ನು ಆಡಿಸಿ ಖುಷಿ ಪಡುತ್ತಾರೆ. ನೀವು ಓದುತ್ತಿರಬಹುದು, ಓದಿ ಮುಗಿಸಿರಬಹುದು, ಕೆಲಸ ಮಾಡುತ್ತಿರಬಹುದು. ಈವರೆಗೂ ನಿಮಗೆ ಪಾಠ ಕಲಿಸಿದ ಹಾಗೂ ಜೀವನ ಪಾಠ ಕಲಿಸಿದ ಯಾರನ್ನೂ ಮರೆಯಬೇಡಿ. ಶಿಕ್ಷಕರ ದಿನಾಚರಣೆಯ ನೆಪದಲ್ಲಾದರೂ ಶಿಕ್ಷಕರಿಗೆ ವಿಶ್ ಮಾಡಿ. ಈ ದಿನ ಅವರದು, ಅವರನ್ನು ಸ್ಪೆಷಲ್ ಫೀಲ್ ಮಾಡಿಸೋ ಕರ್ತವ್ಯ ನಿಮ್ಮದು.




