ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಚುನಾವಣೆಗಳು ಹಾಗೂ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಶನಿವಾರ ಮಹತ್ವದ ಸಂಘಟನಾ ಪುನರ್‌ರಚನೆ ಮಾಡಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಹಲವು ಹಿರಿಯ ನಾಯಕರಿಗೆ ಹೊಸ ರಾಜ್ಯಗಳ ಉಸ್ತುವಾರಿ ವಹಿಸಲಾಗಿದ್ದು, ಕರ್ನಾಟಕ ಸೇರಿದಂತೆ ಅಸ್ಸಾಂ, ಗುಜರಾತ್, ಪಂಜಾಬ್ ರಾಜ್ಯಗಳ ಪಕ್ಷ ಸಂಘಟನೆಯ ಜವಾಬ್ದಾರಿಯಲ್ಲಿ ಬದಲಾವಣೆ ಮಾಡಲಾಗಿದೆ.
ಯಾರಿಗೆ ಎಲ್ಲಿಯ ಉಸ್ತುವಾರಿ?
ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಅಸ್ಸಾಂ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಗುಜರಾತ್ ಉಸ್ತುವಾರಿ ನೀಡಲಾಗಿದ್ದು, ಹೆಚ್ಚುವರಿಯಾಗಿ ಕರ್ನಾಟಕದ ಜವಾಬ್ದಾರಿಯನ್ನೂ ವಹಿಸಲಾಗಿದೆ. ಹೀಗಾಗಿ ಸುರ್ಜೇವಾಲಾ ಇದೀಗ ಎರಡು ಪ್ರಮುಖ ರಾಜ್ಯಗಳ ಸಂಘಟನೆಯನ್ನು ನೋಡಿಕೊಳ್ಳಲಿದ್ದಾರೆ.
ಇದನ್ನೂ ಓದಿ:
ಇದೇ ವೇಳೆ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರಿಗೆ ಪಂಜಾಬ್ ಉಸ್ತುವಾರಿ ವಹಿಸಲಾಗಿದೆ. ಛತ್ತೀಸ್‌ಗಢಕ್ಕೆ ಸುಖದೇವ್ ಭಗತ್, ಮಹಾರಾಷ್ಟ್ರಕ್ಕೆ ಡಾ. ಸಿರಿವೆಲ್ಲ ಪ್ರಸಾದ್ ಹಾಗೂ ಆಂಧ್ರಪ್ರದೇಶಕ್ಕೆ ಪಿ.ವಿ. ಮೋಹನ್ ಅವರನ್ನು ರಾಜ್ಯ ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ.
ಕರ್ನಾಟಕದ ಹೆಚ್ಚುವರಿ ಉಸ್ತುವಾರಿಯನ್ನು ಸುರ್ಜೇವಾಲಾಗೆ ನೀಡಿರುವುದು ವಿಶೇಷ ಗಮನ ಸೆಳೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿರುವ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ, ಸರ್ಕಾರ–ಪಕ್ಷದ ಸಮನ್ವಯ ಹಾಗೂ ಮುಂದಿನ ರಾಜಕೀಯ ಸವಾಲುಗಳ ದೃಷ್ಟಿಯಿಂದ ಈ ಜವಾಬ್ದಾರಿ ಮಹತ್ವದ್ದಾಗಿದೆ.



