ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರೀಸ್‌ನ ರಾಜಧಾನಿ ಅಥೆನ್ಸ್‌ನ ಉತ್ತರ ಭಾಗದಲ್ಲಿ ಶನಿವಾರ ನಡೆದ ವಾರ್ಷಿಕ ವೈಮಾನಿಕ ಪ್ರದರ್ಶನದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಗ್ರೀಕ್ ವಾಯುಪಡೆಗೆ ಸೇರಿದ ಟ್ವಿನ್-ಸೀಟ್ ಫ್ಯಾಂಟಮ್ ಎಫ್-4 ಯುದ್ಧ ವಿಮಾನವು ಹಾರಾಟದ ಪ್ರದರ್ಶನ ನೀಡುತ್ತಿದ್ದಾಗ ದಿಢೀರನೆ ಪತನಗೊಂಡಿದ್ದು, ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ದುರ್ಮರಣಕ್ಕೀಡಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಕೂದಲೆಳೆ ಅಂತರದಲ್ಲಿ ಪಾರಾದ ಸಾವಿರಾರು ಪ್ರೇಕ್ಷಕರು
ಅಥೆನ್ಸ್‌ನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ತಾನಾಗ್ರಾ ವಾಯುಪಡೆ ನೆಲೆಯಲ್ಲಿ ‘ಅಥೆನ್ಸ್ ಫ್ಲೈಯಿಂಗ್ ವೀಕ್’ಏರ್ ಶೋ ಆಯೋಜಿಸಲಾಗಿತ್ತು. ಸಾವಿರಾರು ಪ್ರೇಕ್ಷಕರು ಈ ಅದ್ಭುತ ಪ್ರದರ್ಶನವನ್ನು ವೀಕ್ಷಿಸುತ್ತಿದ್ದಾಗ, ಅತ್ಯಂತ ಕಡಿಮೆ ಎತ್ತರದಲ್ಲಿ ಸಾಹಸ ಪ್ರದರ್ಶನ ನೀಡುತ್ತಿದ್ದ ವಿಮಾನವು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ನೆಲಕ್ಕೆ ಅಪ್ಪಳಿಸಿದೆ. ವಿಮಾನವು ಪ್ರೇಕ್ಷಕರು ಕುಳಿತಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ಪತನಗೊಂಡಿದ್ದರಿಂದ ಸಾರ್ವಜನಿಕರಿಗೆ ಯಾವುದೇ ಗಾಯಗಳಾಗಿಲ್ಲ.
ಆಕಾಶದ ತುಂಬಾ ದಟ್ಟ ಹೊಗೆ
ವಿಮಾನ ಪತನಗೊಳ್ಳುತ್ತಿದ್ದಂತೆ ಇಡೀ ಪ್ರದೇಶದಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಆಕಾಶದ ತುಂಬಾ ಕಪ್ಪು ಹೊಗೆ ಆವರಿಸಿತ್ತು. ಅಪಘಾತದ ವಿಡಿಯೋ ತುಣುಕುಗಳಲ್ಲಿ ವಿಮಾನವು ನೆಲಕ್ಕೆ ಅಪ್ಪಳಿಸಿದ ತಕ್ಷಣವೇ ಮತ್ತೊಂದು ಭಾರೀ ಸ್ಫೋಟ ಸಂಭವಿಸಿ ಬೋಗಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿರುವುದು ಕಂಡುಬಂದಿದೆ. ಆರಂಭದಲ್ಲಿ ಭುಗಿಲೆದ್ದ ಬೆಂಕಿಯ ತೀವ್ರತೆಯಿಂದಾಗಿ ಪೈಲಟ್‌ಗಳ ಮೃತದೇಹಗಳನ್ನು ಹೊರತೆಗೆಯಲು ರಕ್ಷಣಾ ತಂಡಕ್ಕೆ ಸವಾಲಾಗಿತ್ತು. ನಂತರ 85 ಅಗ್ನಿಶಾಮಕ ಸಿಬ್ಬಂದಿ ಹಾಗೂ 11 ಜಲಸ್ಫೋಟಕ ಹೆಲಿಕಾಪ್ಟರ್‌ಗಳ ನೆರವಿನಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಇದನ್ನೂ ಓದಿ:
ದೇಶಾದ್ಯಂತ ಶೋಕಾಚರಣೆ
ಈ ಭೀಕರ ಅಪಘಾತದ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ನಡೆಯಬೇಕಿದ್ದ ಉಳಿದೆಲ್ಲಾ ವೈಮಾನಿಕ ಪ್ರದರ್ಶನಗಳನ್ನು ತಕ್ಷಣವೇ ರದ್ದುಗೊಳಿಸಲಾಗಿದೆ ಮತ್ತು ಸುತ್ತಮುತ್ತಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಈ ದುರಂತಕ್ಕೆ ಗ್ರೀಸ್ ಪ್ರಧಾನಿ ಸೈಪ್ರಸ್ ರಕ್ಷಣಾ ಸಚಿವ ವಾಸಿಲಿಸ್ ಪಾಲ್ಮಾಸ್ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಗ್ರೀಕ್ ವಾಯುಪಡೆಯು ತನ್ನ ವೀರ ಯೋಧರ ಗೌರವಾರ್ಥವಾಗಿ ದೇಶಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆಯನ್ನು ಘೋಷಿಸಿದೆ.



