ಬೆಳಗ್ಗೆ ಎದ್ದ ತಕ್ಷಣದಿಂದ ರಾತ್ರಿ ಕಣ್ಣು ಮುಚ್ಚೋವರೆಗೂ ನಮಗೆ ಒಂದಲ್ಲ ಒಂದು ಉಸಾಬರಿ ಇದ್ದೇ ಇರುತ್ತೆ. ಮನೆ ಖರ್ಚು, ಸಾಲ-ಸೋಲ, ಆಫೀಸ್ ಕಿರಿಕಿರಿ, ಮಕ್ಕಳ ಓದು, ಪಕ್ಕದ… ಅಬ್ಬಾ! ಒಂದಾ ಎರಡಾ? ದಿನಪೂರ್ತಿ ತಲೆಬಿಸಿ ಮಾಡ್ಕೊಂಡು ಸಾಕು ಸಾಕಾಗಿ ಹೋಗಿರುತ್ತೆ. ರಾತ್ರಿ ಬೆಡ್ ಮೇಲೆ ಬಿದ್ರೂ ಕೂಡ ಅದೇ ಚಿಂತೆ, ಅದೇ ಯೋಚನೆ. ‘ಅಯ್ಯೋ ನಾಳೆ ಏನಾಗುತ್ತೋ, ಆ ಕೆಲಸ ಹೆಂಗೆ ಮುಗಿಯುತ್ತೋ’ ಎಂದು ತಲೆಯಲ್ಲಿ ಮಿಕ್ಸಿ ತರ ಯೋಚನೆಗಳು ತಿರುಗುತ್ತಲೇ ಇರುತ್ತವೆ.
ಆದ್ರೆ ಒಂದು ನಿಮಿಷ ನಿಂತು ಯೋಚನೆ ಮಾಡಿ. ಈ ರಾತ್ರಿಪೂರ್ತಿ ತಲೆ ಕೆಡಸ್ಕೊಂಡ್ರೆ ನಾಳೆ ಬೆಳಗಾಗೋದ್ರಲ್ಲಿ ನಿಮ್ಮ ಸಮಸ್ಯೆಗಳೇನಾದ್ರೂ ಮಾಯ ಆಗಿಬಿಡುತ್ತಾ? ಖಂಡಿತ ಇಲ್ಲ. ನಿದ್ದೆಗೆಟ್ಟು ಬೆಳಗ್ಗೆ ಎದ್ದಾಗ ತಲೆನೋವು, ಕಣ್ಣು ಉರಿ, ಜೊತೆಗೆ ಮೈ ಕೈ ಎಲ್ಲಾ ಆಯಾಸ. ಅಷ್ಟೇ ಸಿಗೋದು.
ನಮ್ಮ ದೊಡ್ಡವರು ಸುಮ್ಮನೆ ಹೇಳಿಲ್ಲ “ಬಂದದ್ದು ಬರಲಿ, ಬಂದಿದ್ದು ಹೋಗಲಿ, ಹಾಯಾಗಿ ನಿದ್ರೆ ಮಾಡು” ಎಂದು. ಈ ಪ್ರಪಂಚದಲ್ಲಿ ನೀವು ಎಷ್ಟೇ ತಲೆ ಕೆಡಿಸಿಕೊಂಡ್ರು ಕೆಲವು ವಿಷಯಗಳು ನಮ್ಮ ಕೈಯಲ್ಲಿ ಇರಲ್ಲ. ನಾಳೆ ಏನಾಗುತ್ತೋ ಅದು ಇದ್ದೇ ಇದೆ. ಹಾಗಿದ್ದಾಗ, ಈ ರಾತ್ರಿಯನ್ನು ಯಾಕೆ ಹಾಳು ಮಾಡಿಕೊಳ್ತೀರಾ?
ಯೋಚನೆಗಳನ್ನೆಲ್ಲ ಪಕ್ಕಕ್ಕೆ ಇಟ್ಟು. ಮೊಬೈಲ್ ಫೋನ್ ಪಕ್ಕಕ್ಕಿಟ್ಟು, ಲೈಟ್ ಆಫ್ ಮಾಡಿ, ಹೊದಿಕೆ ಹೊದ್ದು ಆರಾಮಾಗಿ ಮಲಗಿ. ಕಣ್ಣು ಮುಚ್ಚಿ “ಇವತ್ತಿನ ದಿನ ಮುಗೀತು, ನಾಳೆದ್ದು ನಾಳೆಗೆ ನೋಡಿಕೊಳ್ಳೋಣ” ಎಂದು ಮನಸ್ಸಿಗೆ ಹೇಳ್ಕೊಳ್ಳಿ.
ಅದಕ್ಕೆ ಹೇಳೋದು… ಲೈಫಲ್ಲಿ ಎಷ್ಟೇ ಕಷ್ಟ ಬರಲಿ, ಜಂಜಾಟ ಇರಲಿ. ರಾತ್ರಿ ಹೊತ್ತು ಮಾತ್ರ ‘ಡೋಂಟ್ ಕೇರ್’ ಎಂದು ಚಿಂತೆನೆಲ್ಲಾ ಬದಿಗಿಟ್ಟು ಆರಾಮಾಗಿ ಮಲಗಿಬಿಡಿ.. ಶುಭರಾತ್ರಿ!!



