ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ಯಾಕ್ಸಿ ಹಾಗೂ ಇತರೆ ಕ್ಯಾಬ್ಗಳು ಮನಸ್ಸಿಗೆ ಬಂದಷ್ಟು ಹಣವನ್ನು ಪೀಕೋಕೆ ಇನ್ಮುಂದೆ ಸಾಧ್ಯವೇ ಇಲ್ಲ. ಏಕೆಂದರೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಓಡಾಡುವ ಎಲ್ಲ ಕ್ಯಾಬ್ ಹಾಗೂ ಟ್ಯಾಕ್ಸಿಗಳಿಗೆ ಡಿಜಿಟಲ್ ಫೇರ್ ಮೀಟರ್ನ್ನು ಕಡ್ಡಾಯಗೊಳಿಸಿದೆ.
ಈ ಹಿಂದೆ ಅಗ್ರಿಗೇಟರ್ ಕಂಪನಿಗಳು ಮನಸೋಇಚ್ಛೆ ದರವನ್ನು ನಿಗದಿ ಮಾಡುತ್ತಿದ್ದವು. ಆದರೆ ಇದರಿಂದ ಗ್ರಾಹಕರಿಗೆ ಹೊಡೆತ ಬೀಳುತ್ತದೆ ಎನ್ನುವುದನ್ನು ಅರಿದು ಸಾರಿ ಇಲಾಖೆ ನೂತನ ದರ ಪಟ್ಟಿಯನ್ನು ಕೂಡ ರಿಲೀಸ್ ಮಾಡಿದೆ. ಬೆಂಗಳೂರಿನಲ್ಲಿ ಏನೆಲ್ಲಾ ಎಂದರೂ ಎಂಬತ್ತು ಸಾವಿರದಷ್ಟು ಕ್ಯಾಬ್ ಹಾಗೂ ಟ್ಯಾಕ್ಸಿಗಳು ಓಡಾಟ ನಡೆಸುತ್ತವೆ. ಮನಸ್ಸಿಗೆ ಬಂದ ದರ ಹಾಕಿ ಗಲಾಟೆ ಮಾಡಿ ಹಣ ಕಿತ್ತುಕೊಳ್ಳುತ್ತಿದ್ದ ದೂರುಗಳು ಬಂದ ಹಿನ್ನೆಲೆ ಡಿಜಿಟಲ್ ಮೀಟರ್ ಕಡ್ಡಾಯಗೊಳಿಸಲಾಗಿದೆ.
ದರ ಹೇಗಿದೆ?
ನಿಮ್ಮ ವಾಹನ 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಮೌಲ್ಯದ್ದಾಗಿದ್ದರೆ ನಾಲ್ಕು ಕಿ.ಮೀ.ಗೆ 100 ರೂಪಾಯಿಗಳು. ನಂತರದ ಪ್ರತೀ ಕಿಲೋಮೀಟರ್ಗೆ 24 ರೂಪಾಯಿ ದರ ಸೇರುತ್ತಾ ಹೋಗುತ್ತದೆ. ನಿಮ್ಮ ವಾಹನ 10 ರಿಂದ 15 ಲಕ್ಷ ರೂಪಾಯಿ ಮೌಲ್ಯದ್ದಾಗಿದ್ದರೆ ನಾಲ್ಕು ಕಿ.ಮೀವರೆಗೂ 115 ರೂಪಾಯಿ. ತದನಂತರ ಪ್ರತೀ ಕಿ.ಮೀಗೆ 28 ರೂಪಾಯಿಗಳಾಗಿವೆ. ಕಿಲೋಮೀಟರ್ಗೆ ಇನ್ನು ನಿಮ್ಮ ವಾಹನದ ಮೌಲ್ಯ 15 ಲಕ್ಷಕ್ಕಿಂತ ಹೆಚ್ಚಾಗಿದ್ದರೆ ನಾಲ್ಕು ಕಿ.ಮೀವರೆಗೆ 130 ರೂಪಾಯಿ ನಂತರ ಪ್ರತೀ ಕಿಲೋಮೀಟರ್ಗೆ 32 ರೂಪಾಯಿ ನೀಡಬೇಕಿದೆ.
ವೇಟಿಂಗ್ ಚಾರ್ಜ್
ನೀವು ಬುಕ್ ಮಾಡಿದ ನಂತರ ಕ್ಯಾಬ್ ನಿಮ್ಮ ಮನೆಯ ಮುಂದೆ ಬಂದು ನಿಂತ ಐದು ನಿಮಿಷದವರೆಗೆ ಯಾವುದೇ ವೇಟಿಂಗ್ ಚಾರ್ಜ್ ಇರೋದಿಲ್ಲ. ತದನಂತರ ಒಂದು ನಿಮಿಷಕ್ಕೆ ಒಂದು ರೂಪಾಯಿ ನೀಡಬೇಕಾಗುತ್ತದೆ. ರಾತ್ರಿ 12 ರಿಂದ ಬೆಳಗ್ಗೆ 6 ಗಂಟೆವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ ಶೇ.10 ಹೆಚ್ಚುವರಿ ದರ ನಿಗದಿ ಮಾಡಿದೆ.



