October 23, 2026
Friday, October 23, 2026
spot_img

ಛತ್ತೀಸ್‌ಗಢದ ಬಸ್ತಾರ್ ದಸರಾ ಉತ್ಸವಕ್ಕೆ ರಾಷ್ಟ್ರಪತಿ ಭೇಟಿ; ವಿಶೇಷ ಪೂಜೆ ಸಲ್ಲಿಸಿದ ಮುರ್ಮು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಛತ್ತೀಸ್‌ಗಢದ ಜಗದಲ್‌ಪುರದಲ್ಲಿ ನಡೆದ ಐತಿಹಾಸಿಕ ‘ಬಸ್ತಾರ್ ದಸರಾ’ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, “ಬಸ್ತಾರ್ ದಸರಾ ಉತ್ಸವವು ಛತ್ತೀಸ್‌ಗಢದ ಸಾಂಸ್ಕೃತಿಕ ಹೆಮ್ಮೆ ಮತ್ತು ಸಾಮೂಹಿಕ ನಂಬಿಕೆಯ ಸಂಕೇತವಾಗಿದೆ,” ಎಂದರು. ಇಡೀ ಸಮುದಾಯವೇ ಒಟ್ಟಾಗಿ ಈ ಹಬ್ಬದಲ್ಲಿ ಪಾಲ್ಗೊಳ್ಳುವುದು ಅಸಾಧಾರಣವಾಗಿದ್ದು, ಇಲ್ಲಿನ ವಿವಿಧ ಆಚರಣೆಗಳು ಸಮಾಜದ ವಿವಿಧ ವರ್ಗಗಳ ನಡುವೆ ಆಳವಾದ ಬಾಂಧವ್ಯ ಮತ್ತು ಬ್ರಾತೃತ್ವವನ್ನು ಬೆಳೆಸುತ್ತವೆ ಎಂದು ಶ್ಲಾಘಿಸಿದರು.

ನಕ್ಸಲಿಸಂ ಮುಕ್ತ, ಪ್ರಗತಿಯತ್ತ ಬಸ್ತಾರ್

ಛತ್ತೀಸ್‌ಗಢದ ಬಸ್ತಾರ್ ಪ್ರದೇಶವು ದೀರ್ಘಕಾಲದವರೆಗೆ ನಕ್ಸಲಿಸಂ ಪಿಡುಗಿನಿಂದ ತತ್ತರಿಸಿತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಘಟಿತ ಪ್ರಯತ್ನಗಳಿಂದಾಗಿ, ಈ ಪ್ರದೇಶವು ಈಗ ನಕ್ಸಲ್ ಹಿಂಸಾಚಾರದಿಂದ ಮುಕ್ತವಾಗಿದೆ ಮತ್ತು ವೇಗವಾಗಿ ಪ್ರಗತಿಯತ್ತ ಸಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಬುಡಕಟ್ಟು ಉದ್ಯಮಿಗಳಿಗೆ ಪ್ರೋತ್ಸಾಹ

ಬುಡಕಟ್ಟು ಜನಾಂಗದ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡುವುದು ಮತ್ತು ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಇತ್ತೀಚಿನ ಯೋಜನೆಗಳ ವೇಗವನ್ನು ಅವರು ಶ್ಲಾಘಿಸಿದರು. ಈ ಎಲ್ಲ ಅಂತರ್ಗತ ಅಭಿವೃದ್ಧಿ ಪ್ರಯತ್ನಗಳು 2047ರ ವೇಳೆಗೆ ‘ವಿಕಸಿತ ಭಾರತ’ದ ಗುರಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಕೃತಿಯನ್ನು ಪೂಜಿಸುವ ಜೀವನಶೈಲಿ ಆದರ್ಶ

ಬುಡಕಟ್ಟು ಸಮುದಾಯಗಳ ಪ್ರಕೃತಿ-ಸ್ನೇಹಿ ಜೀವನಶೈಲಿಯನ್ನು ಪ್ರಸ್ತಾಪಿಸಿದ ರಾಷ್ಟ್ರಪತಿಗಳು, ಪ್ರಕೃತಿಯನ್ನು ಜೀವದ ಸೆಲೆಯಾಗಿ ಆರಾಧಿಸುವ ಅವರ ಸಂಸ್ಕೃತಿಯಿಂದ ನಾವೆಲ್ಲರೂ ಕಲಿಯಬೇಕಾದದ್ದು ಸಾಕಷ್ಟಿದೆ ಎಂದರು. ದೇಶದ ಅಭಿವೃದ್ಧಿಯ ಪಯಣದಲ್ಲಿ ಪ್ರಕೃತಿಯನ್ನು ಸಂರಕ್ಷಿಸುವುದು ಮತ್ತು ಪೋಷಿಸುವುದು ಇಂದಿನ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು.

ಮುರಿಯಾ ದರ್ಬಾರ್ ಮತ್ತು ಪ್ರದರ್ಶನ ವೀಕ್ಷಣೆ

ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಮುರಿಯಾ ದರ್ಬಾರ್’ನಲ್ಲಿ ಸ್ಥಳೀಯ ಬುಡಕಟ್ಟು ಮುಖಂಡರಾದ ಮಾಂಝಿ ಮತ್ತು ಚಾಲ್ಕಿ ಅವರೊಂದಿಗೆ ಸುದೀರ್ಘ ಸಂವಾದ ನಡೆಸಿದರು. ಇದರೊಂದಿಗೆ ಜಗದಲ್‌ಪುರದಲ್ಲಿ ಆಯೋಜಿಸಲಾಗಿದ್ದ ರಂಗೋಲಿ ಮತ್ತು ದಸರಾ ವಿಶೇಷ ಪ್ರದರ್ಶನವನ್ನು ವೀಕ್ಷಿಸಿದರು. ಕಾರ್ಯಕ್ರಮಗಳ ಆರಂಭಕ್ಕೂ ಮುನ್ನ ಅವರು ಜಗದಲ್‌ಪುರದ ಪ್ರಸಿದ್ಧ ‘ಮಾ ದಂತೇಶ್ವರಿ’ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮತ್ತು ದರುಶನ ಪಡೆದರು.

Must Read