September 7, 2026
Monday, September 7, 2026
spot_img

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕಣ್ಣು, ಕಿವಿ, ಕರುಣೆಯಿಲ್ಲ : ಶ್ರೀರಾಮುಲು

ಹೊಸದಿಗಂತ ವರದಿ ಬಳ್ಳಾರಿ:

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕಣ್ಣು ಇಲ್ಲ, ಕಿವಿಯು ಇಲ್ಲ, ಕರುಣೆನೂ ಇಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಂಪ್ಲಿ ಪಟ್ಟಣದಿಂದ ಸಾಗಿದ ಬಳ್ಳಾರಿ ಚಲೋ ಬೃಹತ್ ಪಾದಯಾತ್ರೆಯಲ್ಲಿ ಸೋಮವಾರ ಮಾತನಾಡಿದರು. ಪ್ರಸಕ್ತ ವರ್ಷ ವರುಣ ಮುನಿಸಿಕೊಂಡಿದ್ದು, ದೇಶಕ್ಕೆ ಅಣ್ಣ ನೀಡುವ ರೈತರ ಸ್ಥಿತಿ ಹೇಳತೀರದಾಗಿದೆ. ಗ್ರಾಮೀಣ ಜನರಿಗೆ ಉದ್ಯೋಗವಿಲ್ಲ, ಅನ್ನದಾತರ ಸ್ಥಿತಿ ಹೇಳತೀರದಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಪತ್ರಿಕೆಗೆ ಜಾಹೀರಾತು ನೀಡುವ ಮೂಲಕ ಪುಕ್ಕಟೆ ಪ್ರಚಾರ ಪಡೆಯುತ್ತಿದೆ ಹೊರತು ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಎಲ್ಲ ಇಲಾಖೆಗಳಲ್ಲೂ ಬ್ರಷ್ಟಾಚಾರ ಮಿತಿ ಮೀರಿದ್ದು, ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಜನರಿಗೆ ಸರ್ಕಾರದ ವೈಫಲ್ಯಗಳನ್ನು ತಿಳಿಸಲು ಹಾಗೂ ಸರ್ಕಾರದ ಗಮನಸೆಳೆಯಲು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ, ರಾಜ್ಯದ ಜನರು ಪ್ರಜ್ಞಾವಂತರಿದ್ದು, ಬರುವ ದಿನಗಳಲ್ಲಿ ಕಾಂಗ್ರೆಸ್ ಗೆ ತಕ್ಕಪಾಠ ಕಳಿಸಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಎಚ್ಚರಿಸಿದರು.

ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ನಾಯಕ್ ಬಾಗಲಕೋಟೆ ಅವರು ಪಾದಯಾತ್ರೆಯಲ್ಲಿ ನಾಯಕರೊಂದಿಗೆ ಹೆಜ್ಜೆ ಹಾಕಿ, ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ದೇಶದಲ್ಲೇ ಬ್ರಷ್ಟಾಚಾರಕ್ಕೆ ಹೆಸರಾಗಿದೆ. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ನಮ್ಮ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಪ್ರತ್ಯೇಕವಾಗಿ ವಾಲ್ಮೀಕಿ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿ, ಕೋಟ್ಯಂತರ ರೂ.ಅನುದಾನ ಬಿಡುಗಡೆ ಮಾಡಿದರು. ಆದರೆ, ಕಾಂಗ್ರೆಸ್ ಸರ್ಕಾರದ ವಾಲ್ಮೀಕಿ ಸಮುದಾಯದ ಮಂತ್ರಿಯಾಗಿದ್ದ ಬಿ.ನಾಗೇಂದ್ರ ಅವರು ಅಧಿಕಾರ ದುರ್ಬಳಕೆ ಮಾಡಿ, 187 ಕೋಟಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಇದು ವಾಲ್ಮೀಕಿ ಸಮುದಾಯಕ್ಕೆ ಮಾಡಿದ ಅಕ್ಷಮ್ಯ ಅಪರಾಧ, ಖಂಡನೀಯ. ಸಮುದಾಯದ ಮಕ್ಕಳ ಶಿಕ್ಷಣಕ್ಕೆ, ಅಭಿವೃದ್ಧಿಗೆ, ಸ್ವ ಉದ್ಯೋಗ ಪ್ರಾರಂಭಿಸಲು ವರದಾನವಾಗಬೇಕಿದ್ದ ಅಭಿವೃದ್ಧಿ ನಿಗಮದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸಾಲದು, ಈ ಹಣ ನಿಗಮಕ್ಕೆ ವಾಪಸ್ಸಾಗಬೇಕು, ಅಲ್ಲಿವರೆಗೆ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಪ್ರಸಕ್ತ ವರ್ಷ ಭೀಕರ ಬರ ಆವರಿಸಿದೆ, ಅನ್ನದಾತರ ಸಂಕಷ್ಟ ಹೇಳತೀರದಾಗಿದೆ, ಗ್ರಾಮೀಣ ಜನರು ಕೂಲಿ ಅರೆಸಿ ಪಟ್ಟಣಕ್ಕೆ ಗುಳೆ ಹೊರಟಿದ್ದಾರೆ, ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ನಮ್ಮ ಅವಧಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಕಾಂಗ್ರೆಸ್ ಲೇಬಲ್ ಹಚ್ಚಿ, ಉದ್ಘಾಟನೆ ಮಾಡಿ ಕಾಂಗ್ರೆಸ್ ನವರು ಪ್ರಚಾರ ಪಡೆಯುತ್ತಿದ್ದಾರೆ. ಇದು ಬಹಳ ದಿನ ನಡೆಯಲ್ಲ, ನಮ್ಮ ರಾಜ್ಯದ ಪ್ರಬುದ್ಧ ಮತದಾರರು ಬರುವ ದಿನಗಳಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ, 2028ಕ್ಕೆ ಮತ್ತೆ ನಮ್ಮದೇ ಭಾಜಪಾ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ, ಕಾದುನೋಡಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ತಿಪ್ಪಣ್ಣ ಸಂಜೀವ್, ಗಣೇಶ ದಗಳಿ, ಮಾಳು ಗುಳಬಾಳ ಸೇರಿದಂತೆ ಸಾವಿರಾರು ಕಾರ್ಯಕರ್ತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !