October 10, 2026
Saturday, October 10, 2026
spot_img

ಜಮೀನಿನಿಂದ ಮನೆಗೆ ಬರುತ್ತಿದ್ದ ರೈತ ದಂಪತಿ ಮೇಲೆ ಕಾಡೆಮ್ಮೆ ದಾಳಿ; ರೈತನಿಗೆ ಗಂಭೀರ ಗಾಯ

ಹೊಸದಿಗಂತ ವರದಿ ಹಾಸನ :

ಜಮೀನಿನ ಕೆಲಸ ಮುಗಿಸಿ ಪತ್ನಿಯೊಂದಿಗೆ ಮನೆಗೆ ಮರಳುತ್ತಿದ್ದ ರೈತನ ಮೇಲೆ ಏಕಾಏಕಿ ಕಾಡೆಮ್ಮೆ ದಾಳಿ ನಡೆಸಿದ ಪರಿಣಾಮ ರೈತನೊಬ್ಬ ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಹಿಳಿಗಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜಯಪ್ರಕಾಶ್ (೪೨) ಗಾಯಗೊಂಡ ರೈತ. ಇವರು ಪತ್ನಿಯೊಂದಿಗೆ ಜಮೀನಿಗೆ ತೆರಳಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದ ವೇಳೆ ಕಾಡೆಮ್ಮೆ ದಾಳಿ ಮಾಡಿದೆ.
ದಾಳಿಯಿಂದ ಜಯಪ್ರಕಾಶ್ ಅವರ ಬಲ ಭುಜದ ಮೂಳೆ ಮುರಿದಿದ್ದು, ಕಾಲಿಗೂ ಗಾಯವಾಗಿದೆ. ಕಾಡೆಮ್ಮೆ ದಾಳಿಯಿಂದ ಅವರ ಪತ್ನಿ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಗಾಯಗೊಂಡ ಜಯಪ್ರಕಾಶ್ ಅವರಿಗೆ ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಗಾಯಾಳು ಜಯಪ್ರಕಾಶ್ ಅವರ ಆರೋಗ್ಯ ವಿಚಾರಿಸಿದರು. ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದ್ದು, ಕಾಡೆಮ್ಮೆ ಸಂಚಾರದ ಬಗ್ಗೆ ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

Must Read