October 9, 2026
Friday, October 9, 2026
spot_img

ಕಾಡಿಗೆ ಹೋಗೋಕೆ ಇಷ್ಟವಿದೆ, ಆದರೆ ಕಣ್ಣೇ ಕಾಣಿಸ್ತಾ ಇಲ್ಲ! ಕಾಡುಕೋಣದ ಪರದಾಟ, ಕಾರ್ಮಿಕರಲ್ಲಿ ಆತಂಕ

ಹೊಸದಿಗಂತ ವರದಿ ಹಾಸನ:

ಕಣ್ಣು ಕಾಣದೆ ಕಾಡಿಗೆ ಮರಳಲಾಗದೆ ಕಳೆದ ಮೂರು ವಾರಗಳಿಂದ ಗ್ರಾಮದಲ್ಲೇ ಅಲೆದಾಡುತ್ತಿರುವ ಕಾಡುಕೋಣವೊಂದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿರುವ ಘಟನೆ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ನಡೆದಿದೆ.

ಮಾಜಿ ಸಚಿವ ಹಾಗೂ ಮೂರು ಬಾರಿ ಶಾಸಕರಾಗಿದ್ದ ಸಗೀರ್ ಅಹಮದ್ ಅವರ ತೋಟದ ಸಮೀಪ ಕಾಡುಕೋಣ ಬೀಡುಬಿಟ್ಟಿದೆ. ಕಣ್ಣು ಕಾಣದಿರುವುದರಿಂದ ಗೋಡೆ, ತಂತಿ ಕಂಬಗಳಿಗೆ ಡಿಕ್ಕಿ ಹೊಡೆಯುತ್ತಾ ಪರದಾಡುತ್ತಿರುವ ಕಾಡುಕೋಣ, ಕೆಲವೊಮ್ಮೆ ವಾಸದ ಮನೆಯ ಹಿಂಭಾಗದಲ್ಲಿಯೇ ನಿಂತುಕೊಳ್ಳುತ್ತಿದೆ.

ಕಾಡುಕೋಣ ಗ್ರಾಮದಲ್ಲೇ ಇರುವ ಹಿನ್ನೆಲೆಯಲ್ಲಿ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಾಡುಕೋಣದ ಓಡಾಟದಿಂದ ಯಾವುದೇ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಅವರು ಕಾಡುಕೋಣ ಇರುವ ಸ್ಥಳಕ್ಕೆ ತೆರಳಿ ವಿಡಿಯೋ ಮಾಡಿದ್ದು, ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕಣ್ಣು ಕಾಣದ ಸ್ಥಿತಿಯಲ್ಲಿರುವ ಕಾಡುಕೋಣವನ್ನು ಸುರಕ್ಷಿತವಾಗಿ ರಕ್ಷಿಸಿ, ಸೂಕ್ತ ಚಿಕಿತ್ಸೆ ನೀಡಿ ಕಾಡಿಗೆ ಮರಳಿಸುವ ಅಥವಾ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Must Read