ಹೊಸದಿಗಂತ ವರದಿ ತಿಪಟೂರು:
ತಿಪಟೂರಿನಲ್ಲಿ ಪೊಲೀಸರ ನಿರ್ಲಕ್ಷ್ಯಕ್ಕೆ ಬೇಸತ್ತು ಅಪ್ಪ-ಮಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.
ಜಮೀನಿನ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯ ಕೇಳಲು ಹೋದ ಸಂತ್ರಸ್ತರಿಗೆ ಪೊಲೀಸ್ ಠಾಣೆಯಲ್ಲಿ ನ್ಯಾಯ ಸಿಗದೆ, ದೂರು ಕೂಡ ದಾಖಲಿಸಿಕೊಳ್ಳದ ಕಾರಣ ಮನನೊಂದು ಇಬ್ಬರೂ ವಿಷ ಸೇವಿಸಿದ್ದಾರೆ.
ನೊಣವಿನಕೆರೆ ಗ್ರಾಮದ ಹುಚ್ಚಪ್ಪ (68) ಹಾಗೂ ಅವರ ಪುತ್ರ ನಾಗರಾಜು (34).ವಿಷ ಕುಡಿದ ದುರ್ದೈವಿಗಳು
ಏನಿದು ಘಟನೆ?
ಜಮೀನಿನ ದಾರಿ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಗಲಾಟೆ ನಡೆದಿತ್ತು. ಈ ಸಂಬಂಧ ನ್ಯಾಯ ಒದಗಿಸುವಂತೆ ಕೋರಿ ತಂದೆ-ಮಗ ಮೊದಲು ನೊಣವಿನಕೆರೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದಾರೆ. ಆದರೆ ಅಲ್ಲಿನ ಪೊಲೀಸರು ದೂರನ್ನು ಸ್ವೀಕರಿಸದೆ ಅಲೆದಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:
ನೊಣವಿನಕೆರೆ ಠಾಣೆಯಲ್ಲಿ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಇಬ್ಬರೂ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆದರೆ ಇಲ್ಲೂ ಕೂಡ ಪೊಲೀಸರು ದೂರನ್ನು ಸ್ವೀಕರಿಸದೆ ಇವರನ್ನು ಸಾಗಹಾಕಿದ್ದಾರೆ ಎನ್ನಲಾಗಿದೆ.
ಠಾಣೆಯಿಂದ ಠಾಣೆಗೆ ಅಲೆದರೂ ಪೊಲೀಸರಿಂದ ಯಾವುದೇ ರಕ್ಷಣೆ ಅಥವಾ ನ್ಯಾಯ ಸಿಗದೆ ತೀವ್ರವಾಗಿ ನೊಂದ ಅಪ್ಪ-ಮಗ, ಕೊನೆಗೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಎದುರು ವಿಷ ಸೇವಿಸಿ ಜೀವ ಕಳೆದುಕೊಳ್ಳಲು ಯತ್ನಿಸಿದ್ದಾರೆ.
ಸದ್ಯ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕಳುಹಿಸಲಾಗಿದ್ದು ಪೊಲೀಸರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.



