September 8, 2026
Tuesday, September 8, 2026
spot_img

ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆಯ ಹೈ-ಸೆಕ್ಯುರಿಟಿ ಅಲರ್ಟ್: ಸಾರ್ವಜನಿಕರಿಗೆ ಪೊಲೀಸರಿಂದ ಮಾರ್ಗಸೂಚಿ ಪ್ರಕಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಅಧ್ಯಕ್ಷತೆಯಲ್ಲಿ ದೇಶದ ರಾಜಧಾನಿ ನವದೆಹಲಿಯಲ್ಲಿ ಸೆಪ್ಟೆಂಬರ್ 11 ರಿಂದ 13 ರವರೆಗೆ ನಡೆಯಲಿರುವ ‘ಬ್ರಿಕ್ಸ್ (BRICS) ಶೃಂಗಸಭೆ 2026’ ಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಇಡೀ ರಾಜಧಾನಿಯಾದ್ಯಂತ ಅತ್ಯಂತ ಬಿಗಿ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದು, ಸಾರ್ವಜನಿಕರ ಸುರಕ್ಷತೆಗಾಗಿ ವಿಶೇಷ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ತೀವ್ರ ನಿಗಾ

ಬ್ರಿಕ್ಸ್ ಶೃಂಗಸಭೆಯು ಹೈಪ್ರೊಫೈಲ್ ಕಾರ್ಯಕ್ರಮವಾಗಿರುವುದರಿಂದ ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ದೆಹಲಿ ಪೊಲೀಸರು ಜನರಲ್ಲಿ ವಿನಂತಿಸಿದ್ದಾರೆ. ಮಾರುಕಟ್ಟೆಗಳು, ಹೋಟೆಲ್‌ಗಳು, ಮೆಟ್ರೋ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಂತಹ ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರು ಸದಾ ಜಾಗರೂಕರಾಗಿರಬೇಕು ಎಂದು ಸೂಚಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಯಾರೂ ಇಲ್ಲದ ಬ್ಯಾಗ್, ಪಾರ್ಸೆಲ್ ಅಥವಾ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದರೆ ಅವುಗಳನ್ನು ಮುಟ್ಟಬಾರದು. ಯಾವುದೇ ವ್ಯಕ್ತಿ ಅಥವಾ ವಾಹನಗಳ ಬಗ್ಗೆ ಅನುಮಾನ ಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಅಪರಿಚಿತ ವ್ಯಕ್ತಿಗಳಿಗೆ ಸರಿಯಾದ ತಪಾಸಣೆ ಇಲ್ಲದೆ ಮನೆ ಬಾಡಿಗೆ ನೀಡುವುದು, ಉದ್ಯೋಗ ಕೊಡುವುದು ಮಾಡಬಾರದು. ಬಾಡಿಗೆದಾರರು ಮತ್ತು ಮನೆಗೆಲಸದವರ ಪೊಲೀಸ್ ವೆರಿಫಿಕೇಶನ್ ಕಡ್ಡಾಯಗೊಳಿಸಲಾಗಿದೆ.

ಗಗನಕ್ಕೇರಿದ ಹೋಟೆಲ್ ರೂಮ್ ದರ

ವಿಶ್ವದ ಪ್ರಮುಖ ನಾಯಕರ ಆಗಮನದ ಹಿನ್ನೆಲೆಯಲ್ಲಿ ದೆಹಲಿ ಮತ್ತು ಎನ್‌ಸಿಆರ್ ವ್ಯಾಪ್ತಿಯಲ್ಲಿರುವ ಐಷಾರಾಮಿ ಹೋಟೆಲ್‌ಗಳ ದರಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿವೆ. ಶೃಂಗಸಭೆಯ ದಿನಗಳಲ್ಲಿ ತಂಗಲು ರೂಮ್‌ಗಳ ಬೇಡಿಕೆ ಹೆಚ್ಚಾಗಿರುವುದರಿಂದ ಹೋಟೆಲ್ ದರವು ಸಾಮಾನ್ಯಕ್ಕಿಂತ ದುಬಾರಿಯಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ, ಶೃಂಗಸಭೆಯ ನಿಗದಿತ ಮಾರ್ಗಗಳು ಮತ್ತು ಸೂಕ್ಷ್ಮ ಪ್ರದೇಶಗಳ ಬಳಿ ಅನಗತ್ಯವಾಗಿ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ:

ತಂತ್ರಜ್ಞಾನ ಮತ್ತು ‘ಎಐ’ ಮೇಲೆ ಭಾರತದ ಒತ್ತು

ಭಾರತದ ನೇತೃತ್ವದಲ್ಲಿ ನಡೆಯುತ್ತಿರುವ ಈ ಬಾರಿಯ ಬ್ರಿಕ್ಸ್ ಶೃಂಗಸಭೆಯು ಮುಖ್ಯವಾಗಿ ನಾವೀನ್ಯತೆ, ಡಿಜಿಟಲ್ ಮೂಲಸೌಕರ್ಯ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳ ಮೇಲೆ ಹೆಚ್ಚಿನ ಗಮನ ಹರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ಸಹಕಾರವನ್ನು ಬಲಪಡಿಸಲು ಮತ್ತು ಹೊಸ ತಂತ್ರಜ್ಞಾನದ ಪರಿಹಾರಗಳನ್ನು ಕಂಡುಕೊಳ್ಳಲು ಈ ಶೃಂಗಸಭೆಯು ಪ್ರಮುಖ ವೇದಿಕೆಯಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !