ಹೊಸದಿಗಂತ ವರದಿ ಹಾಸನ:
ಬೇಲೂರು ತಾಲ್ಲೂಕಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ಗಂಗಾವರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಸುಮಾರು 30 ಕಾಡಾನೆಗಳ ಹಿಂಡು ದಾಂಧಲೆ ನಡೆಸುತ್ತಿದೆ. ಕಾಫಿ, ಭತ್ತ, ಅಡಿಕೆ, ಮೆಕ್ಕೆಜೋಳ ಸೇರಿದಂತೆ ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ತೊಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೊಟ್ಟೆ, ತೊಳಲು, ಅನುಘಟ್ಟ, ಕಣಗುಪ್ಪೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಆನೆಗಳ ಹಿಂಡು ಸಂಚರಿಸುತ್ತಿದೆ. ಮರಿಗಳೇ ಹೆಚ್ಚಿರುವ ಹಿಂಡು ಗ್ರಾಮಗಳತ್ತ ನುಗ್ಗುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಆನೆಗಳನ್ನು ಕಾಡಿನತ್ತ ಓಡಿಸಲು ಇಟಿಎಫ್ ಸಿಬ್ಬಂದಿ ಪಟಾಕಿ ಸಿಡಿಸಿ ಕಾರ್ಯಾಚರಣೆ ನಡೆಸುತ್ತಿದ್ದರೂ, ಆನೆಗಳು ಸ್ಥಳಾಂತರಗೊಳ್ಳದೆ ಬೆಳೆಗಳನ್ನು ನಾಶಪಡಿಸುತ್ತಿವೆ. ಕಾಡಾನೆಗಳ ನಿರಂತರ ದಾಳಿಯಿಂದ ಬೇಲೂರು ಭಾಗದ ರೈತರು ಬೇಸತ್ತಿದ್ದಾರೆ.

ಸಿಬ್ಬಂದಿಯನ್ನೇ ಅಟ್ಟಾಡಿಸಿದ ಒಂಟಿಸಲಗ:
ಗಂಗಾವರ ಗ್ರಾಮದಲ್ಲಿ ಮದದಲ್ಲಿರುವ ಒಂಟಿಸಲಗವೊಂದು ಇಟಿಎಫ್ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಘಟನೆ ನಡೆದಿದೆ. ಆನೆ ಘೀಳಿಡುತ್ತಾ ಸಿಬ್ಬಂದಿಯತ್ತ ನುಗ್ಗಿದಾಗ, ಸಿಬ್ಬಂದಿ ಎದ್ದುಬಿದ್ದು ಓಡಿ ಪಾರಾಗಿದ್ದಾರೆ. ಶಾಲೆಯ ಮುಂಭಾಗ ಹಾಗೂ ಗ್ರಾಮದೊಳಗೆ ಸಲಗ ಕಾಣಿಸಿಕೊಂಡಿದ್ದು, ರಸ್ತೆ ದಾಟುವ ಸಂರ‍್ಭದಲ್ಲಿ ಬಸ್ ಮತ್ತು ಅರಣ್ಯ ಇಲಾಖೆ ಜೀಪ್‌ಗಳತ್ತಲೂ ನುಗ್ಗಿದೆ. ಇದರಿಂದ ವಾಹನ ಚಾಲಕರು ಹಾಗೂ ಸ್ಥಳದಲ್ಲಿದ್ದ ಜನರಲ್ಲಿ ಆತಂಕ ಉಂಟಾಯಿತು.
ಇದನ್ನೂ ಓದಿ:
ಪಟಾಕಿ ಸಿಡಿಸಿ ಆನೆಗಳನ್ನು ಕಾಡಿನತ್ತ ಓಡಿಸಲು ಸಿಬ್ಬಂದಿ ಪ್ರಯತ್ನಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಗಂಗಾವರ ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮನೆಗಳ ಮುಂದೆಯೇ ಸಲಗಗಳು ಸಂಚರಿಸುತ್ತಿರುವುದರಿಂದ ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ.



