ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಫಿನ್‌ಟೆಕ್ ಬೆಳವಣಿಗೆ, ಯುಪಿಐನ ಜಾಗತಿಕ ವಿಸ್ತರಣೆ ಹಾಗೂ ಹೊಸ ತಂತ್ರಜ್ಞಾನಗಳಿಂದ ಸೃಷ್ಟಿಯಾಗುತ್ತಿರುವ ಅವಕಾಶಗಳ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ‘Reform Express’ ಮತ್ತಷ್ಟು ವೇಗವಾಗಿ ಮುನ್ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯುಪಿಐ ಆರ್ಥಿಕ ವಹಿವಾಟಿನಲ್ಲಿ ದೊಡ್ಡ ಪರಿವರ್ತನೆ
ಮುಂಬೈನಲ್ಲಿ ನಡೆದ Global Fintech Fest 2026ರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಫಿನ್‌ಟೆಕ್ ಪಯಣವನ್ನು ಗಮನಾರ್ಹ ಬೆಳವಣಿಗೆ ಎಂದು ಹೊಗಳಿದರು. ಈ ಬದಲಾವಣೆಯ ಪ್ರಮುಖ ಚಾಲಕ ಶಕ್ತಿಗಳಲ್ಲಿ ಯುಪಿಐ ಕೂಡ ಒಂದಾಗಿದೆ. ಫಿನ್‌ಟೆಕ್ ಕ್ಷೇತ್ರದ ಬಗ್ಗೆ ಚರ್ಚಿಸುವಾಗ ಯುಪಿಐ ಬಗ್ಗೆ ಹೇಳದೆ ಇರಲು ಸಾಧ್ಯವಿಲ್ಲ ಎಂದ ಅವರು, ಡಿಜಿಟಲ್ ಪಾವತಿ ವ್ಯವಸ್ಥೆಯು ದೇಶದ ಆರ್ಥಿಕ ವಹಿವಾಟಿನಲ್ಲಿ ದೊಡ್ಡ ಪರಿವರ್ತನೆ ತಂದಿದೆ ಎಂದು ಹೇಳಿದರು.
ದೇಶದ ಆರ್ಥಿಕತೆ ಶೇ.7.8ರಷ್ಟು ಬೆಳವಣಿಗೆ
ಇದೇ ವೇಳೆ ಭಾರತದ ಆರ್ಥಿಕ ಬೆಳವಣಿಗೆಯನ್ನೂ ಮೋದಿ ಪ್ರಸ್ತಾಪಿಸಿದರು. ಪಶ್ಚಿಮ ಏಷ್ಯಾ ಸಂಘರ್ಷದಿಂದ ಇಂಧನ ಮತ್ತು ಸರಕು ಪೂರೈಕೆ ವ್ಯವಸ್ಥೆಗಳ ಮೇಲೆ ಒತ್ತಡವಿದ್ದರೂ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆ ಶೇ.7.8ರಷ್ಟು ಬೆಳವಣಿಗೆ ಕಂಡಿದೆ ಎಂದು ಹೇಳಿದರು. ಜಪಾನ್‌ನ ಕ್ರೆಡಿಟ್ ರೇಟಿಂಗ್ ಸಂಸ್ಥೆಯೊಂದು ಭಾರತದ ಸಾರ್ವಭೌಮ ರೇಟಿಂಗ್ ಅನ್ನು ‘A’ ವರ್ಗಕ್ಕೆ ಮೇಲ್ದರ್ಜೆಗೇರಿಸಿರುವುದನ್ನೂ ಅವರು ಉಲ್ಲೇಖಿಸಿದರು.
ಇದನ್ನೂ ಓದಿ:
ಮುಂದಿನ ಹಂತದಲ್ಲಿ ಏಜೆಂಟಿಕ್ AI, ಟೋಕನೈಸೇಶನ್ ಹಾಗೂ ಕ್ವಾಂಟಮ್ ತಂತ್ರಜ್ಞಾನಗಳು ಹಣಕಾಸು ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲಿವೆ ಎಂದು ಮೋದಿ ಹೇಳಿದರು. ಈ ತಂತ್ರಜ್ಞಾನಗಳನ್ನು ಪ್ರಾಯೋಗಿಕ ಪರಿಹಾರಗಳಾಗಿ ಪರಿವರ್ತಿಸುವಂತೆ ಫಿನ್‌ಟೆಕ್ ಕಂಪನಿಗಳಿಗೆ ಕರೆ ನೀಡಿದರು.
ಏನಿದು 4 ಆದ್ಯತೆ?
ಇದಕ್ಕಾಗಿ ನಾಲ್ಕು ಪ್ರಮುಖ ಆದ್ಯತೆಗಳನ್ನು ಅವರು ಮುಂದಿಟ್ಟರು. ಡಿಜಿಟಲ್ ಹಣಕಾಸು ವ್ಯವಸ್ಥೆಯನ್ನು ಸುರಕ್ಷಿತಗೊಳಿಸಲು ಬಲಿಷ್ಠ ಸೈಬರ್ ಸುರಕ್ಷತೆ, ಗ್ರಾಹಕರ ಮಾಹಿತಿಗಾಗಿ ನೈತಿಕ ಡೇಟಾ ಸಂರಕ್ಷಣಾ ಮಾನದಂಡಗಳು, ಫಿನ್‌ಟೆಕ್ ಕಂಪನಿಗಳು ಮತ್ತು ನಿಯಂತ್ರಕರ ನಡುವೆ ಬಲವಾದ ನವೋದ್ಯಮ ವ್ಯವಸ್ಥೆ ಹಾಗೂ Fintech Consumer Protection Index ರೂಪಿಸುವಂತೆ ಸಲಹೆ ನೀಡಿದರು.



