ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಾವಲಂಬಿ ಭಾರತವನ್ನು ನಿರ್ಮಿಸುವಲ್ಲಿ ಅಂಗನವಾಡಿ ಕೇಂದ್ರಗಳು ಮತ್ತು ಪ್ರಾಥಮಿಕ ಶಾಲೆಗಳು ಭದ್ರ ಬುನಾದಿಯಾಗಲಿವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲವಾಗಿ ಇಂದು ದೇಶದ ಅಂಗನವಾಡಿ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗುತ್ತಿದೆ ಎಂದಿದ್ದಾರೆ.
ಈ ಬಗ್ಗೆ ವಾರಾಣಸಿಯಲ್ಲಿ ಆಯೋಜಿಸಲಾಗಿದ್ದ 9ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೈಟೆಕ್ ಆದ ಅಂಗನವಾಡಿ ಕೇಂದ್ರಗಳು
2017 ಕ್ಕಿಂತ ಮೊದಲು ಉತ್ತರ ಪ್ರದೇಶದ ಅಂಗನವಾಡಿಗಳು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದವು ಎಂದು ನೆನಪಿಸಿಕೊಂಡ ಸಿಎಂ, ಅಂದಿನ ದಿನಗಳಲ್ಲಿ ಮಕ್ಕಳು ಕೂರಲು ಮನೆಯಿಂದಲೇ ಚಾಪೆ ತರಬೇಕಿತ್ತು ಹಾಗೂ ಕುಡಿಯುವ ನೀರು, ಶೌಚಾಲಯ ಮತ್ತು ಬಿಸಿ ಊಟದ ಸೌಲಭ್ಯವಿರಲಿಲ್ಲ ಎಂದರು.
ಕಳೆದ 9 ವರ್ಷಗಳಲ್ಲಿ ರಾಜ್ಯದ 70,000 ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಹೊಸ ರೂಪ ನೀಡಲಾಗಿದೆ. ಇವು ಕೇವಲ ಪೌಷ್ಟಿಕ ಆಹಾರ ನೀಡುವ ಕೇಂದ್ರಗಳಾಗಿ ಉಳಿದಿಲ್ಲ, ಬದಲಿಗೆ ‘ಬಾಲ ವಾಟಿಕಾ’ ಮೂಲಕ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ನೀಡುವ ಕೇಂದ್ರಗಳಾಗಿಯೂ ಬದಲಾಗಿವೆ. ಅದೇ ರೀತಿ ಆಹಾರ ವಿತರಣೆ ಮತ್ತು ಅದರ ಗುಣಮಟ್ಟವನ್ನು ಪತ್ತೆಹಚ್ಚಲು ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
‘ನನ್ನ ಅಂಗನವಾಡಿ, ನನ್ನ ಜವಾಬ್ದಾರಿ’
ಈ ಬಾರಿಯ ಪೋಷಣ್ ಮಾಸಾಚರಣೆಯ ಘೋಷವಾಕ್ಯವಾದ ‘ನನ್ನ ಅಂಗನವಾಡಿ, ನನ್ನ ಜವಾಬ್ದಾರಿ’ ಬಗ್ಗೆ ಮಾತನಾಡಿದ ಸಿಎಂ, ಅಂಗನವಾಡಿಗಳನ್ನು ನಡೆಸುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ಕಾರ್ಯಕರ್ತೆ, ಸಹಾಯಕಿ, ಗ್ರಾಮ ಪಂಚಾಯತ್ ಮತ್ತು ನಾಗರಿಕರು ಇದರ ಜವಾಬ್ದಾರಿ ಹೊರಬೇಕು ಎಂದು ಕರೆ ನೀಡಿದರು. ಗರ್ಭಿಣಿಯರು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ಸುಧಾರಣೆಗಾಗಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ:
ಇದೇ ಸಂದರ್ಭದಲ್ಲಿ ವಾರಾಣಸಿಯನ್ನು ಸನಾತನ ಸಂಸ್ಕೃತಿಯ ಆಧ್ಯಾತ್ಮಿಕ ರಾಜಧಾನಿ ಎಂದು ಬಣ್ಣಿಸಿದ ಅವರು, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕಾಶಿಯು ತನ್ನ ಪುರಾತನ ದೈವತ್ವವನ್ನು ಉಳಿಸಿಕೊಂಡೇ ಜಾಗತಿಕ ಮಟ್ಟದಲ್ಲಿ ಹೊಸ ಗುರುತನ್ನು ಪಡೆದಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಹಾಗೂ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್ ಉಪಸ್ಥಿತರಿದ್ದರು.



