ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ‘ಮೆಗಾ ಡಿಎಸ್‌ಸಿ 2025’ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ವಿರೋಧ ಪಕ್ಷಗಳ ಆರೋಪಗಳನ್ನು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತಳ್ಳಿಹಾಕಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ನೀಡಿರುವ ಸಿಬಿಐ ತನಿಖೆಯ ಬೇಡಿಕೆಯನ್ನು ನಿರಾಕರಿಸಿರುವ ಅವರು, ಸರ್ಕಾರಿ ಅಧಿಕಾರಿಗಳು ಈಗಾಗಲೇ ಪ್ರತಿಯೊಂದು ಆರೋಪಕ್ಕೂ ಸ್ಪಷ್ಟ ಉತ್ತರಗಳನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಕಾನೂನು ಹೋರಾಟದ ನಡುವೆ 14,000 ಹುದ್ದೆಗಳ ಭರ್ತಿ
ಡಾ. ಬಿ.ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಈ ನೇಮಕಾತಿ ಪ್ರಕ್ರಿಯೆಯ ವಿರುದ್ಧ ಬರೋಬ್ಬರಿ 355 ಕೋರ್ಟ್ ಕೇಸ್‌ಗಳನ್ನು ದಾಖಲಿಸಲಾಗಿತ್ತು. ಇಷ್ಟೆಲ್ಲಾ ಕಾನೂನು ಅಡೆತಡೆಗಳ ನಡುವೆಯೂ ಸರ್ಕಾರವು ಕೇವಲ ಒಂದು ವರ್ಷದ ಅವಧಿಯಲ್ಲಿ 14,000 ಶಿಕ್ಷಕರಿಗೆ ಉದ್ಯೋಗ ನೀಡುವಲ್ಲಿ ಯಶಸ್ವಿಯಾಗಿದೆ. ನಾನೂ ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಸಮ್ಮುಖದಲ್ಲಿ ಬೃಹತ್ ಸಮಾವೇಶ ನಡೆಸಿ ನೂತನ ಶಿಕ್ಷಕರಿಗೆ ನೇಮಕಾತಿ ಆದೇಶಗಳನ್ನು ವಿತರಿಸಿದ್ದೆವು ಎಂದು ಹೇಳಿಕೊಂಡಿದ್ದಾರೆ.
ಶಿಕ್ಷಕರ ಕುಟುಂಬಗಳಲ್ಲಿ ಗೊಂದಲ ಮೂಡಿಸುವ ಯತ್ನ
ನೇಮಕಾತಿ ಪ್ರಕ್ರಿಯೆ ಮುಗಿದು ಒಂದು ವರ್ಷ ಕಳೆದ ನಂತರ, ಈಗ ಕೆಲವು ಶಕ್ತಿಗಳು ಅಕ್ರಮದ ರಾಗ ಎಳೆಯುತ್ತಿವೆ ಎಂದು ಆರೋಪಿಸಿದ ನಾಯ್ಡು, ಆಯ್ಕೆಯಾದ ಶಿಕ್ಷಕರ ಕುಟುಂಬಗಳಲ್ಲಿ ಗೊಂದಲ ಮೂಡಿಸಿ ಅವರನ್ನು ಸಮಾಜದ ಮುಂದೆ ಅವಮಾನಿಸಲು ಈ ರೀತಿಯ ವ್ಯವಸ್ಥಿತ ಪಿತೂರಿ ನಡೆಸಲಾಗುತ್ತಿದೆ. ವಿರೋಧ ಪಕ್ಷಗಳು ಕೇಳಿದ 10 ಪ್ರಶ್ನೆಗಳಿಗೂ ನಮ್ಮ ಅಧಿಕಾರಿಗಳು 10 ಬಾರಿ ಸ್ಪಷ್ಟನೆ ನೀಡಿದ್ದಾರೆ. ನ್ಯಾಯಾಲಯದಲ್ಲೂ ಇವರ ಆರೋಪಗಳಿಗೆ ಯಾವುದೇ ಬಲವಾದ ಪುರಾವೆಗಳು ಸಿಕ್ಕಿಲ್ಲ. ಹೀಗಿರುವಾಗ ಸಿಬಿಐ ತನಿಖೆ ಏಕೆ? ಇಂತಹ ಸುಳ್ಳು ಅಪಪ್ರಚಾರಗಳನ್ನು ನಾನು ಒಪ್ಪುವುದಿಲ್ಲ ಎಂದು ಸಿಎಂ ಸಿಡಿಮಿಡಿಗೊಂಡಿದ್ದಾರೆ.
ಇದನ್ನೂ ಓದಿ;
ವಿಪಕ್ಷಗಳ ಧೋರಣೆಗೆ ನಾಯ್ಡು ಪ್ರಶ್ನೆ
ವಿರೋಧ ಪಕ್ಷಗಳ ನಡವಳಿಕೆಯನ್ನು ತರಾಟೆಗೆ ತೆಗೆದುಕೊಂಡ ಸಿಎಂ, ನೀವು ನ್ಯಾಯಾಲಯದ ಅವಲೋಕನಗಳನ್ನೂ ಒಪ್ಪುವುದಿಲ್ಲ, ಇತ್ತ ಚರ್ಚೆ ನಡೆಸಲು ಅಸೆಂಬ್ಲಿಗೂ ಬರುವುದಿಲ್ಲ. ನೀವು ಹೇಳುವುದೇ ಅಂತಿಮ ಸತ್ಯ ಎನ್ನುವಂತೆ ವರ್ತಿಸಿದರೆ ಹೇಗೆ? ಇಂತಹ ಆಧಾರರಹಿತ ಪ್ರಚಾರಗಳನ್ನು ಎಷ್ಟು ದಿನ ಸಹಿಸಬೇಕು? ಎಂದು ಸಾರ್ವಜನಿಕವಾಗಿ ಪ್ರಶ್ನಿಸಿದ್ದಾರೆ. ಸರ್ಕಾರವು ಸಂಪೂರ್ಣವಾಗಿ ಕಾನೂನುಬದ್ಧವಾಗಿಯೇ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಎಂದು ಈ ವೇಳೆ ಪುನರುಚ್ಚರಿಸಿದ್ದಾರೆ.



