October 8, 2026
Thursday, October 8, 2026
spot_img

ಚೇತರಿಸಿಕೊಂಡ್ರೂ ಸಿಗಲಿಲ್ಲ ಗ್ರೀನ್ ಸಿಗ್ನಲ್: ಅಫ್ಘಾನ್ ಸರಣಿಯಿಂದ ಹರ್ಷಿತ್ ರಾಣಾ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬರುವ ಅಫ್ಘಾನಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 13 ರಿಂದ ನವದೆಹಲಿಯಲ್ಲಿ ಪಂದ್ಯಗಳು ಆರಂಭವಾಗಲಿದ್ದು, ಪ್ರತಿಯೊಬ್ಬ ಅಭಿಮಾನಿಯೂ ಮೈದಾನದಲ್ಲಿ ಭಾರತದ ಧಮಾಕಾ ನೋಡಲು ಕಾಯುತ್ತಿದ್ದಾರೆ. ಆದರೆ, ಪಂದ್ಯ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಸಣ್ಣದೊಂದು ಶಾಕ್ ಎದುರಾಗಿದೆ. ತಂಡದ ಯುವ ಹಾಗೂ ಭರವಸೆಯ ವೇಗಿ ಹರ್ಷಿತ್ ರಾಣಾ ಈ ಸರಣಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ.

ಹರ್ಷಿತ್ ರಾಣಾ ಅವರು ಸರಣಿಗೆ ಲಭ್ಯವಾಗುತ್ತಾರೋ ಇಲ್ಲವೋ ಎಂಬುದನ್ನು ತಿಳಿಯಲು ಸೆಪ್ಟೆಂಬರ್ 9 ರಂದು ಬೆಂಗಳೂರಿನ ‘ಸೆಂಟರ್ ಆಫ್ ಎಕ್ಸಲೆನ್ಸ್’ನಲ್ಲಿ ಅವರಿಗೆ ಕಠಿಣವಾದ ಮ್ಯಾಚ್ ಸಿಮ್ಯುಲೇಶನ್ ಫಿಟ್‌ನೆಸ್ ಪರೀಕ್ಷೆ ನಡೆಸಲಾಗಿತ್ತು. ಬಿಸಿಸಿಐ ವೈದ್ಯಕೀಯ ತಂಡ ಅವರ ಪ್ರತಿಯೊಂದು ನಡೆಯನ್ನೂ ಹತ್ತಿರದಿಂದ ಗಮನಿಸಿದೆ. ಆದರೆ, ಪರೀಕ್ಷೆಯ ವರದಿ ಬಂದಾಗ ವೈದ್ಯರು ‘ನೋ’ ಎಂದಿದ್ದಾರೆ.

ವರದಿಯ ಪ್ರಕಾರ, ಹರ್ಷಿತ್ ಅವರ ಗಾಯ ಗುಣಮುಖವಾಗುತ್ತಿದೆಯಾದರೂ, ಅಂತಾರಾಷ್ಟ್ರೀಯ ಮಟ್ಟದ ಹೈ-ವೋಲ್ಟೇಜ್ ಪಂದ್ಯ ಆಡಲು ಅವರು ಇನ್ನೂ 10 ರಿಂದ 15 ದಿನಗಳ ಕಾಲ ಪೂರ್ಣ ವಿಶ್ರಾಂತಿ ಪಡೆಯಬೇಕಿದೆ. ಆತುರಪಟ್ಟು ಮೈದಾನಕ್ಕೆ ಇಳಿಸಿದರೆ ಗಾಯ ಮತ್ತೆ ಉಲ್ಬಣಗೊಳ್ಳುವ ಅಪಾಯವಿದೆ. ಹೀಗಾಗಿ ಬಿಸಿಸಿಐ ವೈದ್ಯಕೀಯ ತಂಡ ಅವರಿಗೆ ಸಂಪೂರ್ಣ ಫಿಟ್‌ನೆಸ್ ಸಾಧಿಸಲು ಹೆಚ್ಚಿನ ಸಮಯ ನೀಡಲು ತೀರ್ಮಾನಿಸಿದೆ.

ಹರ್ಷಿತ್ ರಾಣಾಗೆ ಗಾಯದ ಸಮಸ್ಯೆ ಹೊಸದೇನಲ್ಲ. ಕಳೆದ ಜುಲೈನಲ್ಲಿ ನಡೆದ ಇಂಗ್ಲೆಂಡ್ ಪ್ರವಾಸದ ವೇಳೆ ಅವರು ‘ಹ್ಯಾಮ್‌ಸ್ಟ್ರಿಂಗ್’ ಗಾಯಕ್ಕೆ ತುತ್ತಾಗಿದ್ದರು. ಅಷ್ಟೇ ಅಲ್ಲ, ಇದಕ್ಕೂ ಮೊದಲು ಮೊಣಕಾಲು ಗಾಯದ ಸಮಸ್ಯೆಯಿಂದಾಗಿ ಅವರು ಐಪಿಎಲ್ ಮತ್ತು ಟಿ20 ವಿಶ್ವಕಪ್‌ನಂತಹ ದೊಡ್ಡ ಟೂರ್ನಿಗಳನ್ನೇ ಕಳೆದುಕೊಂಡಿದ್ದರು. ಜೂನ್-ಜುಲೈ ವೇಳೆಗೆ ಮತ್ತೆ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ಈ ಯುವ ವೇಗಿಗೆ, ಈ ಹ್ಯಾಮ್‌ಸ್ಟ್ರಿಂಗ್ ಗಾಯ ನಿಜಕ್ಕೂ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

ಈಗ ಹರ್ಷಿತ್ ರಾಣಾ ಹೊರಬಿದ್ದ ಕಾರಣ ಅವರ ಜಾಗ ತುಂಬಲು ಬಿಸಿಸಿಐ ಹೊಸ ಪ್ಲಾನ್ ಮಾಡಿಕೊಳ್ಳುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ ಪರ ತಮ್ಮ ಮಾರಕ ಆಟದಿಂದ ಎಲ್ಲರ ಗಮನ ಸೆಳೆದಿದ್ದ ಯುವ ವೇಗಿ ಪ್ರಿನ್ಸ್ ಯಾದವ್ ಅವರಿಗೆ ಟೀಮ್ ಇಂಡಿಯಾದಿಂದ ಕರೆ ಬರುವ ಎಲ್ಲಾ ಸಾಧ್ಯತೆಗಳಿವೆ. ಪ್ರಿನ್ಸ್ ಯಾದವ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ತಾಕತ್ತು ತೋರಿಸಲು ಸಿಗುತ್ತಿರುವ ದೊಡ್ಡ ಅವಕಾಶವಾಗಿದೆ.

Must Read