September 10, 2026
Thursday, September 10, 2026
spot_img

‘ಕರ್ನಾಟಕ ಮಾಡೆಲ್’ ದೇಶಕ್ಕೆ ಮಾದರಿ; ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಡಿಕೆಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಗ್ಯಾರಂಟಿ ಯೋಜನೆಗಳ ಶುರುವಿಗೆ ಪ್ರತಿಪಕ್ಷಗಳು ಟೀಕಿಸಿದ್ದವು. ಆದರೆ ಇಂದು ಇದೇ ಮಾದರಿಯನ್ನು ದೇಶದ ಹಲವು ರಾಜ್ಯಗಳು ಅಳವಡಿಸಿಕೊಳ್ಳುತ್ತಿರುವುದ್ದು ನಮ್ಮ ರಾಜ್ಯ ಮಾದರಿ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸರ್ಕಾರದ 100 ದಿನಗಳ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ, ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿಯೋಜನೆ, ಯುವನಿಧಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದರು.

ಇದು ನನ್ನೊಬ್ಬನ ಸರ್ಕಾರ ಮಾತ್ರವಲ್ಲ ರಾಜ್ಯದ 7 ಕೋಟಿ ಜನರ ಸರ್ಕಾರ, ನಾನೊಬ್ಬನೇ ರಥ ಎಳೆಯುತ್ತಿಲ್ಲ ನನ್ನ ಜತೆಗೆ 224 ಶಾಸಕರು 75 ಎಂಎಲ್​ಸಿಗಳು ರಾಜ್ಯದ ಎಲ್ಲಾ ಸಂಸದರು ಒಟ್ಟಾಗಿ ದುಡಿಯುವ ಕೆಲಸ ಮಾಡುತ್ತಿದ್ದೇವೆ. ಯಾವುದೇ ಭೇದಭಾವವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವುದು ಸರ್ಕಾರದ ಉದ್ದೇಶ ಎಂದು ಹೇಳಿದರು.

ಇದನ್ನೂ ಓದಿ:

ಐದು ಗ್ಯಾರಂಟಿ ವಿವರಿಸಿದ ಡಿಕೆಶಿ

ಐದು ಗ್ಯಾರಂಟಿ ಯೋಜನೆಗಳಡಿ ಈವರೆಗೆ 1.45 ಲಕ್ಷ ಕೋಟಿಗೂ ಅಧಿಕ ಹಣ ವ್ಯಯಿಸಲಾಗಿದೆ ಎಂದು ತಿಳಿಸಿದ ಅವರು, ಗೃಹಲಕ್ಷ್ಮಿ ಮೂಲಕ 1.24 ಕೋಟಿ ಮಹಿಳೆಯರಿಗೆ ನೆರವು, ಗೃಹಜ್ಯೋತಿ ಅಡಿಯಲ್ಲಿ 1.67 ಕೋಟಿ ಜನರಿಗೆ ಉಚಿತ ವಿದ್ಯುತ್ ಹಾಗೂ ಅನ್ನಭಾಗ್ಯದಿಂದ 4.44 ಕೋಟಿ ಜನರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ಶಕ್ತಿ ಯೋಜನೆಯಡಿ 821 ಕೋಟಿ ಉಚಿತ ಬಸ್ ಪ್ರಯಾಣಗಳು ನಡೆದಿದ್ದು, 15,735 ಕೋಟಿ ವೆಚ್ಚವಾಗಿದೆ. ಯುವನಿಧಿ ಯೋಜನೆಯಡಿ 3.72 ಲಕ್ಷ ಯುವಕರಿಗೆ ನೆರವು ನೀಡಲಾಗಿದೆ ಎಂದು ವಿವರಿಸಿದರು.

ಅಷ್ಟೇ ಅಲ್ಲದೆ ರೈತರಿಗೆ 25,652 ಕೋಟಿ ಶೂನ್ಯ ಬಡ್ಡಿ ಸಾಲ, ನೀರಾವರಿ ಯೋಜನೆಗಳಿಗೆ 17 ಸಾವಿರ ಕೋಟಿ ಹಾಗೂ KKRDBಗೆ 5 ಸಾವಿರ ಕೋಟಿ ನೀಡಲಾಗಿದೆ ಎಂದರು. ಗೃಹ ಆರೋಗ್ಯ ಯೋಜನೆಯಡಿ 88 ಲಕ್ಷಕ್ಕೂ ಹೆಚ್ಚು ಜನರ ತಪಾಸಣೆ ನಡೆಸಲಾಗಿದೆ. 2023ರಿಂದ 2.53 ಲಕ್ಷ ಕೋಟಿ ಬಂಡವಾಳ ಹೂಡಿಕೆ ರಾಜ್ಯಕ್ಕೆ ಬಂದಿದೆ ಎಂದು ಹೇಳಿದರು.

6 ಲಕ್ಷ ಉದ್ಯೋಗ ಸೃಷ್ಟಿ

ಬೆಂಗಳೂರು ರಸ್ತೆ ಅಭಿವೃದ್ಧಿಗೆ 2 ಸಾವಿರ ಕೋಟಿ, ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ನೀಡುವ ಕ್ರಮ, 6 ಲಕ್ಷ ಉದ್ಯೋಗ ಸೃಷ್ಟಿ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೊಳಿಸಿದೆ ಎಂದರು.

ಭಾರತ್ ಜೋಡೋ ಸಂಘಗಳ ಸ್ಥಾಪನೆ ಇದು ನನ್ನ ಕನಸು. ನಶೆ ಮುಕ್ತ ಕರ್ನಾಟಕ ಮಾಡೋದಕ್ಕೆ ನಿರ್ಧಾರ ಮಾಡಿದ್ದೇವೆ. ಸಚಿವ ಪ್ರಿಯಾಂಕ್ ಖರ್ಗೆ ಜತೆ ಮಾತಾಡಿದ್ದೇವೆ. ಪ್ರತಿ ಗ್ರಾ.ಪಂ.ನಲ್ಲಿ ಯುವಕ ಯುವತಿಯರು ಒಗ್ಗಟ್ಟಾಗಿ ಸೇರಬೇಕು. 10 ಸಾವಿರ ಭಾರತ್ ಜೋಡೋ ಯುವ ಸಂಘಟನೆ ಮಾಡಿದ್ದೇವೆ. ಯುವಕರಿಗೆ ಉದ್ಯೋಗ ಸೇತು ಹೊಸ ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.

ತುಂಗಭದ್ರಾ ಜಲಾಶಯದ ಗೇಟ್‌ಗಳ ಬದಲಾವಣೆ, ಮೇಕೆದಾಟು ಯೋಜನೆಗೆ ಸಂಬಂಧಿಸಿದ ಬೆಳವಣಿಗೆ ಹಾಗೂ ರಾಜ್ಯದ ಜಲ ಸಂಪನ್ಮೂಲಗಳ ಅಭಿವೃದ್ಧಿಯನ್ನೂ ಪ್ರಸ್ತಾಪಿಸಿದ ಶಿವಕುಮಾರ್, ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೆ ಸಂದರ್ಭದಲ್ಲಿ ಕಚೇರಿ ಅಲೆದಾಟವಿಲ್ಲದೆ ನಾಗರಿಕರಿಗೆ ತ್ವರಿತ ಸೇವೆ ನೀಡಲು ‘ಸೇವಾ ಒನ್’, ಅನ್ನದಾತನಿಗೆ ಆಸರೆಯಾಗಲು ‘ರೈತ ಚೈತನ್ಯ’, ಸರ್ಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ‘ಶಾಲೆಗಳ ಸಿಎಸ್‌ಆರ್ ಪೋರ್ಟಲ್’ ಲೋಕಾರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ ‘ಉಚಿತ ಬಸ್‌ ಪಾಸ್’ ವಿತರಣೆಗೆ ಚಾಲನೆ ನೀಡಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !