ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿಯವರ ತಾಯಿಯವರಿಗೆ ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆಯಡಿ ನೋಟಿಸ್ ನೀಡಲಾಗಿದೆ ಎಂಬ ಸುದ್ದಿ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಮುಖ್ಯಮಂತ್ರಿಯವರ ತಾಯಿಯವರಿಗೆ ಯಾವುದೇ ನೋಟಿಸ್ ನೀಡಲಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
184-ಕನಕಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 249ರ ಮತದಾರರ ಪಟ್ಟಿಯಲ್ಲಿ ‘ಗೌರಮ್ಮ’ ಎಂಬ ಹೆಸರಿನ ಮೂವರು ಮತದಾರರಿದ್ದಾರೆ. ಇವರಲ್ಲಿ ಕ್ರಮ ಸಂಖ್ಯೆ 464ರಲ್ಲಿ ಗೌರಮ್ಮ ಕೋಂ ಕೆಂಪೇಗೌಡ, ಕ್ರಮ ಸಂಖ್ಯೆ 532ರಲ್ಲಿ ಗೌರಮ್ಮ ಕೋಂ ಕೆಂಪೇಗೌಡ ಹಾಗೂ ಕ್ರಮ ಸಂಖ್ಯೆ 460ರಲ್ಲಿ ಗೌರಮ್ಮ ಕೋಂ ದೊಡ್ಡಕೆಂಪೇಗೌಡ ಎಂದು ನಮೂದಾಗಿದೆ.
ಇದನ್ನೂ ಓದಿ:
ಕ್ರಮ ಸಂಖ್ಯೆ 464ರಲ್ಲಿ ಇರುವ ಗೌರಮ್ಮ ಅವರೇ ಮುಖ್ಯಮಂತ್ರಿಯವರ ತಾಯಿಯಾಗಿದ್ದು, ಅವರಿಗೆ ಮತದಾರರ ಪಟ್ಟಿಯ ಪರಿಷ್ಕರಣೆ ಸಂಬಂಧ ಯಾವುದೇ ನೋಟಿಸ್ ನೀಡಲಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಇದೇ ಮತಗಟ್ಟೆ ವ್ಯಾಪ್ತಿಯಲ್ಲಿರುವ ಇತರ ಇಬ್ಬರು ಗೌರಮ್ಮ ಅವರಿಗೆ ಮಾತ್ರ ನೋಟಿಸ್ ನೀಡಲಾಗಿದೆ.
ಹೆಸರಿನ ಸಾಮ್ಯತೆಯಿಂದ ಈ ಗೊಂದಲ ಉಂಟಾಗಿದ್ದು, ಮುಖ್ಯಮಂತ್ರಿಯವರ ತಾಯಿಗೆ ಎಸ್‌ಐಆರ್ ನೋಟಿಸ್ ನೀಡಲಾಗಿದೆ ಎಂಬ ಮಾಧ್ಯಮ ವರದಿಗಳು ವಾಸ್ತವಾಂಶಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಪಾರದರ್ಶಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



