September 11, 2026
Friday, September 11, 2026
spot_img

ಅಮ್ಮಂದಿರ ನೃತ್ಯ ಪ್ರತಿಭೆಗೆ ಸಿಗಲಿದೆ ದೊಡ್ಡ ವೇದಿಕೆ: ನಾಳೆಯಿಂದ ಜೀ ಕನ್ನಡದಲ್ಲಿ ʼDKD ಸೂಪರ್ ಮಾಮ್ʼ ಹವಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮನೆ, ಸಂಸಾರ, ಮಕ್ಕಳು ಅಂತಲೇ ಬದುಕಿನ ಬಹುಪಾಲು ಸಮಯವನ್ನು ಕಳೆಯುವ ಅಮ್ಮಂದಿರ ಪ್ರತಿಭೆಗೆ ಜೀ ಕನ್ನಡ ವಾಹಿನಿ ಈಗ ಅತಿ ದೊಡ್ಡ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಕರ್ನಾಟಕದ ಅಮ್ಮಂದಿರ ನೃತ್ಯದ ಕನಸುಗಳಿಗೆ ಹೊಸ ರೆಕ್ಕೆ ನೀಡಲು ಬಹುನಿರೀಕ್ಷಿತ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ ರಿಯಾಲಿಟಿ ಶೋ ನಾಳೆಯಿಂದ (ಸೆ.12) ನಿಮ್ಮ ಮನೆಮನ ತಲುಪಲು ಸಜ್ಜಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಅಮ್ಮಂದಿರ ಸ್ಪೂರ್ತಿದಾಯಕ ಕಥೆಗಳೇ ಹೈಲೈಟ್

ಕುಟುಂಬದ ಜವಾಬ್ದಾರಿ, ಕೆಲಸದ ಒತ್ತಡಗಳ ನಡುವೆಯೂ ನೃತ್ಯದ ಮೇಲಿನ ಪ್ರೀತಿಯನ್ನು ಜೀವಂತವಾಗಿರಿಸಿಕೊಂಡಿರುವ ಸ್ಪೂರ್ತಿದಾಯಕ ಅಮ್ಮಂದಿರ ಬದುಕಿನ ಪಯಣವೇ ಈ ಶೋನ ಜೀವಾಳ. ವರ್ಷಗಳಿಂದ ಬದಿಗಿಟ್ಟಿದ್ದ ತಮ್ಮ ಆಸೆ-ಆಕಾಂಕ್ಷೆಗಳಿಗೆ ಮರುಜೀವ ನೀಡಿ, ಆತ್ಮವಿಶ್ವಾಸದಿಂದ ವೇದಿಕೆಯೇರಲಿರುವ ತಾಯಂದಿರ ಡ್ಯಾನ್ಸ್ ಪ್ರದರ್ಶನಗಳು ವೀಕ್ಷಕರಿಗೆ ವಿಶೇಷ ರಸದೌತಣ ನೀಡಲಿವೆ. ಆರಂಭಿಕ ಆಡಿಷನ್ ಸಂಚಿಕೆಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ವಿಭಿನ್ನ ಹಿನ್ನೆಲೆಯ ತಾಯಂದಿರ ಕಥೆಗಳು ಅನಾವರಣಗೊಳ್ಳಲಿವೆ.

ತೀರ್ಪುಗಾರರ ಸೀಟಿನಲ್ಲಿ ಸ್ಟಾರ್ ಬಳಗ

ಯಾವಾಗಲೂ ಹಸನ್ಮುಖಿಯಾಗಿ ಪ್ರೇಕ್ಷಕರನ್ನು ರಂಜಿಸುವ ಜನಪ್ರಿಯ ನಿರೂಪಕಿ ಅನುಶ್ರೀ ಅವರ ಚುರುಕಿನ ನಿರೂಪಣೆಯಲ್ಲಿ ಈ ಶೋ ಮೂಡಿಬರಲಿದೆ. ಇನ್ನು ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಲು ಸ್ಯಾಂಡಲ್‌ವುಡ್‌ನ ದೊಡ್ಡ ತಾರಾಬಳಗವೇ ತೀರ್ಪುಗಾರರ ಸೀಟಿನಲ್ಲಿ ಕುಳಿತುಕೊಳ್ಳಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಖ್ಯಾತ ನಿರ್ದೇಶಕ ತರುಣ್ ಸುಧೀರ್, ನಟ ವಿಜಯ್ ರಾಘವೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಇರಲಿದ್ದಾರೆ.

ಇದನ್ನೂ ಓದಿ:

ವಿವಿಧ ಹಿನ್ನೆಲೆಯಿಂದ ಬಂದಿರುವ ಅಮ್ಮಂದಿರು ತಮ್ಮದೇ ಆದ ಅನುಭವ, ವ್ಯಕ್ತಿತ್ವ ಮತ್ತು ನೃತ್ಯ ಪ್ರತಿಭೆಯೊಂದಿಗೆ ವೇದಿಕೆಯೇರಲಿದ್ದು, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ನಲ್ಲಿ ವಿಭಿನ್ನ ಪ್ರದರ್ಶನಗಳು ಹಾಗೂ ಅವರ ಬದುಕಿನ ಕಥೆಗಳು ವೀಕ್ಷಕರಿಗೆ ಪರಿಚಯಿಸಲಿದ್ದಾರೆ. ಕುಟುಂಬದವರ ಕನಸುಗಳಿಗೆ ಸದಾ ಬೆಂಬಲವಾಗಿ ನಿಂತಿರುವ ಈ ತಾಯಂದಿರು, ಇದೀಗ ತಮ್ಮದೇ ಕನಸುಗಳನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಇಡುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !