September 11, 2026
Friday, September 11, 2026
spot_img

ಬ್ರಿಕ್ಸ್ ಶೃಂಗಸಭೆ | ಭಾರತಕ್ಕೆ ಆಗಮಿಸಿದ ವ್ಲಾಡಿಮಿರ್ ಪುಟಿನ್: ಅಪ್ಪುಗೆಯ ಸ್ವಾಗತ ನೀಡಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಬಂದಿಳಿದಿದ್ದು, ತಮ್ಮ ಪ್ರೀತಿಯ ಅಪ್ಪುಗೆಯಿಂದ ಪ್ರಧಾನಿ ಮೋದಿ ಪುಟಿನ್ ಅವರನ್ನು ಸ್ವಾಗತಿಸಿದರು. ಬಳಿಕ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

ಹಲವು ವಿಷಯಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ

2030ರ ವೇಳೆಗೆ ಭಾರತ-ರಷ್ಯಾ ನಡುವಿನ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು 100 ಬಿಲಿಯನ್‌ಗೆ ಹೆಚ್ಚಿಸುವುದು ಸೇರಿದಂತೆ ರಕ್ಷಣಾ, ಇಂಧನ ಮತ್ತು ನಿರ್ಣಾಯಕ ಖನಿಜ ಕ್ಷೇತ್ರಗಳ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ನಾಯಕರು ಚರ್ಚಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ:

ಭಾರತ ಮತ್ತು ರಷ್ಯಾ ನಡುವಿನ ಈಗಾಗಲೇ ಬಲಿಷ್ಠವಾಗಿರುವ ರಕ್ಷಣಾ ಸಹಕಾರವನ್ನು ವಿಸ್ತರಿಸುವ ಬಗ್ಗೆಯೂ ಮಾತುಕತೆ ನಡೆಸುವ ಸಾಧ್ಯತೆ ಇದೆ. ಜತೆಗೆ ನಾಗರಿಕ ಪರಮಾಣು ಸಹಕಾರವನ್ನು ವಿಸ್ತರಿಸುವ ಬಗ್ಗೆಯೂ ಚರ್ಚಿಸಲಿದ್ದಾರೆ. ಪರಮಾಣು ಇಂಧನ ಚಕ್ರ, ಯೋಜನೆಗಳ ನಿರ್ವಹಣೆ ಹಾಗೂ ಜೀವನಚಕ್ರ ಬೆಂಬಲ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ಸಾಧ್ಯತೆಯಿದೆ.

ಪುಟಿನ್ ಕೈಸೇರಿದ ‘ತಿರುಕ್ಕುರಳ್’

ಸಭೆಯ ವೇಳೆ ಪ್ರಧಾನಿ ಮೋದಿ ಅವರು ತಮಿಳಿನ ಶ್ರೇಷ್ಠ ಕೃತಿ ‘ತಿರುಕ್ಕುರಳ್’ನ ರಷ್ಯನ್ ಭಾಷೆಯ ಅನುವಾದದ ಪ್ರತಿಯನ್ನು ಅಧ್ಯಕ್ಷ ಪುಟಿನ್ ಅವರಿಗೆ ಉಡುಗೊರೆಯಾಗಿ ನೀಡಿದರು. ತಮಿಳು ಸಂತ ಹಾಗೂ ದಾರ್ಶನಿಕ ತಿರುವಳ್ಳುವರ್ ರಚಿಸಿರುವ ‘ತಿರುಕ್ಕುರಳ್’ ಮಾನವೀಯ ಮೌಲ್ಯಗಳು, ನೈತಿಕತೆ, ಆಡಳಿತ ಮತ್ತು ಸತ್ಯದಂತಹ ಸಾರ್ವಕಾಲಿಕ ವಿಚಾರಗಳನ್ನು ಒಳಗೊಂಡಿದೆ.

ರಷ್ಯಾ ಅಧ್ಯಕ್ಷರಿಗೆ ಈ ಕೃತಿಯ ರಷ್ಯನ್ ಅನುವಾದವನ್ನು ಉಡುಗೊರೆಯಾಗಿ ನೀಡುವ ಮೂಲಕ ಪ್ರಧಾನಿ ಮೋದಿ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ದ್ವಿಪಕ್ಷೀಯ ರಾಜತಾಂತ್ರಿಕ ವೇದಿಕೆಯಲ್ಲಿ ಪರಿಚಯಿಸಿದರು.

ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಕೂಡ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ್ದು, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !