September 12, 2026
Saturday, September 12, 2026
spot_img

80’s ಟ್ರೆಂಡ್‌ ಮಾಡೋಕೆ ಹೋಗಿ ಮೊಬೈಲ್‌ ಡೇಟಾ ಕಳ್ಕೊಂಡೀರಾ ಜಾಗ್ರತೆ! ಫೋಟೊ ಅಪ್‌ಲೋಡ್‌ ಮಾಡುವ ಮುನ್ನ ಇದನ್ನು ಓದಿ

ಕೇವಲ ಹತ್ತೇ ದಿನಗಳಲ್ಲಿ ಟ್ರೆಂಡ್‌ ಒಂದು ಜನರನ್ನು ಎಷ್ಟರ ಮಟ್ಟಿಗೆ ಸೆಳೆದಿದೆ ಎಂದರೆ ಯಾವುದೇ ಸಾಮಾಜಿಕ ಜಾಲತಾಣ ಓಪನ್‌ ಮಾಡಿದರೂ ನಿಮಗೆ 80’s ಟ್ರೆಂಡ್‌ ಕಾಣಿಸುತ್ತದೆ. ಲೂಸ್‌ ಲೂಸಾದ ಜೀನ್ಸ್‌, ಇನ್‌ಶರ್ಟ್‌ ಮಾಡಿರುವ ಟಾಪ್‌, ಮೇಲೊಂದು ಡೆನಿಮ್‌ ಕೋಟ್‌, ತಲೆ ತುಂಬಾ ಕರ್ಲಿ ಹೇರ್‌! ಇದನ್ನು ಬಿಟ್ಟರೆ ಇನ್‌ಶರ್ಟ್‌ ಆಗಿರುವ ಪಟ್ಟೆ ಪಟ್ಟೆಯ ಶರ್ಟ್‌, ಬೆಲ್ಟ್‌, ದೊಗಲೆ ಪ್ಯಾಂಟ್‌, ಹೆಣ್ಣುಮಕ್ಕಳಿಗೆ ಪಫ್‌ ಸ್ಲೀವ್‌ ಇರುವ ಬ್ಲೌಸ್‌, ಕೆಂಪು ರಂಗಿನ ಸೀರೆ, ದೊಡ್ಡ ಸರ ಹಾಗೂ ಕರ್ಲಿ ಹೇರ್‌! ಈ ಫೋಟೊಗಳನ್ನು ನೋಡಿ ನೋಡಿ ಜನರಿಗೆ ಸಾಕಾಗಿ ಹೋಗಿರಬಹುದು. ಎಐಗೆ ತಮ್ಮ ಫೋಟೊ ಕೊಟ್ಟು 80’s ಟ್ರೆಂಡ್‌ ಫೋಟೊ ತೆಗೆದುಕೊಂಡ ಕ್ಷಣ ಸಿಗುವ ಸಂತೋಷಕ್ಕೆ ಬೆಲೆ ಕಟ್ಟೋಕೆ ಆಗೋದಿಲ್ಲ. ಹಲವರು ಈ ಫೋಟೊಗಳನ್ನು ಶೇರ್‌ ಮಾಡಿದ್ದಾರೆ. ಕೆಲವರು ಮಾತ್ರ ಶೇರ್‌ ಮಾಡದೇ ಗ್ಯಾಲರಿಯಲ್ಲೇ ಇಟ್ಟುಕೊಂಡಿದ್ದಾರೆ. ಆದರೆ ಎಲ್ಲರೂ ತಾವು ಹೇಗೆ ಕಾಣಿಸುತ್ತಿದ್ವಿ ಎಂದು ನೋಡಿಕೊಳ್ಳೋಕೆ 80’s ಟ್ರೆಂಡ್‌ಗಾಗಿ ಗೂಗಲ್‌ ಜೆಮಿನಿ ಅಥವಾ ಚಾಟ್‌ಜಿಪಿಟಿಗೆ ಫೋಟೊ ಹಾಕಿದ್ದಂತೂ ಸತ್ಯ!

ನಿಮ್ಮ ಪ್ರಾಣಕ್ಕಿಂತ ಹೆಚ್ಚಿರುವ ಸಂಗಾತಿ, ಪೋಷಕರು, ಮಕ್ಕಳ ಫೋಟೊ ಅಪ್‌ಲೋಡ್‌ ಮಾಡೋಕೆ ಮುನ್ನ ಈ ಫೋಟೊ ಎಲ್ಲಿ ಹೋಗುತ್ತಿದೆ, ನಮ್ಮ ಕುಟುಂಬದ ಫೋಟೊಗಳನ್ನು ಯಾರೆಲ್ಲಾ ನೋಡಬಹುದು? ಒಮ್ಮೆ ಹಾಕಿದ್ದನ್ನು ಮತ್ತೆ ಡಿಲೀಟ್‌ ಮಾಡೋಕೆ ಸಾಧ್ಯವಾ ಎನ್ನುವ ವಿಚಾರಗಳ ಬಗ್ಗೆ ಕ್ಷಣಕ್ಕಾದ್ರೂ ಯೋಚನೆ ಮಾಡಿದ್ದೀರಾ? ಸಾಮಾಜಿಕ ಜಾಲತಾಣ ಅಷ್ಟೇ ಅಲ್ಲ ನೀವು ಎಲ್ಲಿ ಫೋಟೊ ಅಪ್‌ಲೋಡ್‌ ಮಾಡಿದರೂ, ಅದನ್ನು ನೀವು ಡಿಲೀಟ್‌ ಮಾಡಿದರೂ ಅದಕ್ಕೆ ಅರ್ಥವೇ ಇಲ್ಲ. ನೆನಪಿರಲಿ, ಪ್ರತಿಯೊಂದೂ ಡಾರ್ಕ್‌ವೆಬ್‌ನಲ್ಲಿ ಹಾಗೆಯೇ ಉಳಿಯುತ್ತದೆ.

ಫೀಲಿಂಗ್‌ಗಳನ್ನು ಕ್ಯಾಚ್‌ ಮಾಡಿದ ಟ್ರೆಂಡ್‌

ಕೆಲವೊಮ್ಮೆ ಟ್ರೆಂಡ್‌ ಆಗೋ ಫೋಟೊಗಳಿಗೆ ಅರ್ಥ ಇರೋದಿಲ್ಲ. ಸುಮ್ಮನೆ ಸಣ್ಣ ಇದ್ರೆ ಹೇಗೆ ಕಾಣಬಹುದು, ದಪ್ಪ ಆದ್ರೆ ಹೇಗೆ ಕಾಣಬಹುದು ಎನ್ನುವುದು ಟ್ರೆಂಡ್‌ ಆಗುತ್ತದೆ. ಆದರೆ ಈಗಿನ 80’s ಟ್ರೆಂಡ್‌ ಆಗೋಕೆ ಕಾರಣ ನಾಸ್ಟಾಲ್ಜಿಯಾ ಹಾಗೂ ಭಾವನೆಗಳು. ಪ್ರತೀ ಜನರೇಷನ್‌ ಹಳೆಯ ದಿನಗಳನ್ನು, ವರ್ಷಗಳನ್ನು ವಿಂಟೇಜ್‌ ಹಾಗೂ ಆಂಟಿಕ್‌ ಎಂದು ಪರಿಗಣಿಸುತ್ತದೆ. ಚಿಕ್ಕವರಿದ್ದಾಗ ನೋಡಿದ ಸಿನಿಮಾ ಹೀರೋಯಿನ್‌ನಂತೆ ಕಾಣುವ ಅವಕಾಶ ಮಾಡಿಕೊಟ್ಟಾಗ ಯಾರೂ ನೋ ಅನ್ನೋದಿಲ್ಲ. ಅದೇ ಎಮೋಷನ್ಸ್‌ ಎಲ್ಲರಲ್ಲೂ ಬಂದಿದ್ದು, ಈ ಟ್ರೆಂಡ್‌ ನಾಲ್ಕೈದು ದಿನದಲ್ಲಿ ಸೆನ್ಸೇಷನ್‌ ಆಗಿಬಿಟ್ಟಿದೆ.

ಬೇರೆ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡ್ಬೇಡಿ

ಚಾಟ್‌ ಜಿಪಿಟಿ ಅಥವಾ ಗೂಗಲ್‌ ಜೆಮಿನಿಯ ಲಿಮಿಟ್‌ ಮುಗಿದ ತಕ್ಷಣ ಸಿಕ್ಕ ಸಿಕ್ಕ ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಫೋಟೊ ಅಪ್‌ಲೋಡ್‌ ಮಾಡಬೇಡಿ. ಇಲ್ಲಿ ನಿಮ್ಮ ಐಡೆಂಟಿಟಿ, ಫೋನ್‌ ನಂಬರ್‌, ಮುಖದ ಚಹರೆ, ಫಿಂಗರ್‌ಪ್ರಿಂಟ್‌ ಇನ್ನಿತರ ಪ್ರಮುಖ ಡೇಟಾ ಕಳವಾಗುತ್ತದೆ. ಸೈಬರ್‌ ವಂಚಕರು ನೀವಂದುಕೊಂಡದ್ದಕ್ಕಿಂತ ತುಂಬಾನೇ ಸ್ಮಾರ್ಟ್‌ ಆಗಿ ಇರುತ್ತಾರೆ. ನಿಮ್ಮ ಕೆಲಸದಲ್ಲಿ ನೀವು ಹೇಗೆ ಬೆಸ್ಟ್‌ ಆಗಿರುತ್ತೀರೋ ಅವರ ಕೆಟ್ಟ ಕೆಲಸದಲ್ಲೂ ಅವರು ಬೆಸ್ಟ್‌ ಆಗಿರುತ್ತದೆ. ಸಣ್ಣ ಬೇಜವಾಬ್ದಾರಿಯಿಂದ ಸಮಸ್ಯೆ ಅನುಭವಿಸಬೇಕಾಗುತ್ತದೆ.

ನಿಮ್ಮ ಮಾಹಿತಿ ಮಾರಾಟವಾಗುತ್ತದೆ

ಬೇರೆ ಅಪ್ಲಿಕೇಷನ್‌ಗಳಿಂದ ಫೋಟೊ ತೆಗೆದುಕೊಳ್ಳುವುದು, ಬೇರೆ ಕಡೆ ಫೋಟೊ ಅಪ್‌ಲೋಡ್‌ ಮಾಡುವುದು, ಸೋಶಿಯಲ್‌ ಮೀಡಿಯಾದಲ್ಲಿ ನಿಮ್ಮ ಖಾಂದಾನ್‌ನ ಫೋಟೊ ಹಾಕುವುದನ್ನು ನಿಲ್ಲಿಸಿಬಿಡಿ. ಇದನ್ನು ಕಳ್ಳರು ಡೇಟಾವಾಗಿ ಪರಿವರ್ತಿಸಿ ಹಣಕ್ಕೆ ಮಾರಾಟ ಮಾಡುತ್ತಾರೆ. ಎಂದಾದರು ಕಂಪನಿಗಳಿಂದ, ಮಾಲ್‌ಗಳಿಂದ ಕರೆ ಬಂದಿದೆಯಾ? ನಿಮ್ಮ ಫೋನ್‌ ನಂಬರ್‌ ಹೇಗೆ ಸಿಕ್ತು ಎಂದು ಕೇಳಿದರೆ ನಮ್ಮ ಬಳಿ ಸ್ಟೋರ್‌ ಆಗಿರುತ್ತದೆ ಎಂದು ಉಡಾಫೆ ಉತ್ತರ ನೀಡುತ್ತಾರೆ. ನೀವು ಯಾವುದೋ ದಿನ ಮಾಲ್‌ನಲ್ಲಿ ಊಟ ಮಾಡೋಕೆ ಬಿಲ್ಲಿಂಗ್‌ಗೆ ಕೊಟ್ಟ ಫೋನ್‌ ನಂಬರ್‌ ಸರ್ವೀಸ್‌ ಬೇಸ್‌ ಇರುವ ಪ್ರತೀ ಕಂಪನಿಯ ಬಳಿಯೂ ಇರುತ್ತದೆ. ಒಂದು ಕಡೆ ನಂಬರ್‌ ಕೊಟ್ರೆ ಅದನ್ನು ಸಾವಿರ ಕಡೆ ಮಾರಾಟ ಮಾಡಿಕೊಳ್ಳಲಾಗುತ್ತದೆ. ಇದರ ಬಗ್ಗೆ ಎಚ್ಚರ ಇರಲಿ.

80’s ಟ್ರೆಂಡ್‌ ಅಷ್ಟೇ ಅಲ್ಲ, ಇಂತಹ ಸಾವಿರ ಟ್ರೆಂಡ್‌ಗಳು ಮುಂದೆಯೂ ಬರುತ್ತವೆ. ಅದಕ್ಕೆಲ್ಲಾ ಮರುಳಾಗಬೇಡಿ, ಫೋಟೊಗಳನ್ನು ಅಪ್‌ಲೋಡ್‌ ಮಾಡಬೇಡಿ. ಸಾಮಾಜಿಕ ಜಾಲತಾಣಗಳ ಬಳಕೆಗೆ ಮಿತಿ ಸೆಟ್‌ ಮಾಡಿಕೊಳ್ಳಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !