ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ಯಾಂಕಾಕ್ನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನೊಬ್ಬನ ಬಳಿಯಿಂದ 15 ಕೆ.ಜಿ. ಹೈಡ್ರೋಪೋನಿಕ್ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಂದಾಜು 5.25 ಕೋಟಿ ರೂ ಮೌಲ್ಯದ ಮಾದಕವಸ್ತು ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಭಾರತೀಯ ಪ್ರಜೆಯನ್ನು ಬಂಧಿಸಲಾಗಿದೆ.
ಸೆಪ್ಟೆಂಬರ್ 10ರ ರಾತ್ರಿ ಬ್ಯಾಂಕಾಕ್ನಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕನನ್ನು ವಿಮಾನ ನಿಲ್ದಾಣದ ಏರ್ ಇಂಟೆಲಿಜೆನ್ಸ್ ಯುನಿಟ್ (AIU) ಅಧಿಕಾರಿಗಳು ಅನುಮಾನಗೊಂಡು ತಪಾಸಣೆಗೆ ಒಳಪಡಿಸಿದ್ದರು. ಥಾಯ್ ಏರ್ವೇಸ್ನ TG 325 ವಿಮಾನದಲ್ಲಿ ಆತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ಕ್ಕೆ ಬಂದಿದ್ದ.
ಬ್ಯಾಗ್ ನಲ್ಲಿತ್ತು ಹೈಡ್ರೋಪೋನಿಕ್ ಗಾಂಜಾ
ಪ್ರಾಥಮಿಕ ತಪಾಸಣೆ ಬಳಿಕ ಪ್ರಯಾಣಿಕನ ಬ್ಯಾಗೇಜ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಈ ವೇಳೆ ಬ್ಯಾಗ್ನಲ್ಲಿ ಅಕ್ರಮವಾಗಿ ಅಡಗಿಸಿಟ್ಟಿದ್ದ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಅಧಿಕಾರಿಗಳ ಪ್ರಕಾರ, ವಶಪಡಿಸಿಕೊಂಡ ಮಾದಕವಸ್ತುವಿನ ಒಟ್ಟು ತೂಕ 15 ಕೆ.ಜಿ. ಆಗಿದ್ದು, ಇದರ ಅಂದಾಜು ಮಾರುಕಟ್ಟೆ ಮೌಲ್ಯ 5.25 ಕೋಟಿ ಎಂದು ತಿಳಿಸಲಾಗಿದೆ.
ಬಂಧಿತನನ್ನು ಸೂರಜ್ ಸೂರ್ಯವಂಶಿ ಎಂದು ಗುರುತಿಸಲಾಗಿದೆ. ಬ್ಯಾಂಕಾಕ್ನಿಂದ ಈ ಮಾದಕವಸ್ತುವನ್ನು ಬೆಂಗಳೂರಿಗೆ ತರಲಾಗುತ್ತಿತ್ತೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಣಿಕನ ವಿರುದ್ಧ ಮಾದಕ ದ್ರವ್ಯಗಳು ಮತ್ತು ಅಮಲು ಪದಾರ್ಥಗಳ ಕಾಯ್ದೆ (NDPS Act), 1985ರ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.



